ಟೋಕಿಯೋ (ಜು.25): ಭಾರತದ ಅನುಭವಿ ಬಾಕ್ಸರ್, ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ಡೊಮಿನಿಕ್ ರಿಪಬ್ಲಿಕ್ ನ ಮಿಗುಲಿನ ಹೆರ್ನಾಂಡೀಜ್ ಎದುರು 4-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪ್ರೀಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ.
38 ವರ್ಷದ ಮೇರಿ ಕೋಮ್ ತನಗಿಂತ 15 ವರ್ಷ ಕಡಿಮೆ ಹರೆಯದ ಡೊಮಿನಿಕನ್ ಸ್ಪರ್ಧಿಯ ವಿರುದ್ಧ ಸೆಣಸಾಡಿದರು. ಆರಂಭದಿಂದ ಅಂತ್ಯದವರೆಗೆ ಭಾರೀ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮೇರಿ ಕೋಮ್ ತಮ್ಮ ಅದ್ಭುತ ಪಟ್ಟುಗಳನ್ನು ಪ್ರದರ್ಶಿಸಿದರು.
ಮೊದಲ ಸುತ್ತಿನಲ್ಲಿ ಮೇರಿ ಕೋಮ್ 3-2 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಇನ್ನು ಎರಡನೇ ಸುತ್ತಿನ ಹೋರಾಟದಲ್ಲೂ ಮೇರಿ ಮತ್ತೆ 3-2ರ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಮೂರನೇ ಸುತ್ತಿನ ಕದನದಲ್ಲೂ ಬಲಿಷ್ಠ ಪಂಚ್ ಗಳ ಮೂಲಕ ಆಕ್ರಮಣಕಾರಿ ರಣತಂತ್ರ ರೂಪಿಸಿಕೊಂಡ ಮೇರಿ ಎದುರಾಳಿಗೆ ಮೇಲುಗೈ ಸಾಧಿಸಲು ನೀಡಲಿಲ್ಲ. ಅಂತಿಮವಾಗಿ ಮೇರಿ ಮೇರಿ 4-1 ಅಂತರದಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದರು.
2012ರ ಲಂಡನ್ ಒಲಿಂಪಿಕ್ಸ್ ಪದಕ ವಿಜೇತೆ ಮೇರಿ ಕೋಮ್ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ