Home ಟಾಪ್ ಸುದ್ದಿಗಳು ಮುಂದಿನ ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮುಖ್ಯ ಅತಿಥಿ

ಮುಂದಿನ ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮುಖ್ಯ ಅತಿಥಿ

ಲಂಡನ್‌: 2021ರ ಜನವರಿ 26ರಂದು ನಡೆಯುವ ದೇಶದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಪಾಲ್ಗೊಳ್ಳಲಿದ್ದಾರೆ.

ಕಳೆದ ತಿಂಗಳು ಬೋರಿಸ್‌ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದ ಮೋದಿ ಅವರು ಗಣರಾಜ್ಯೋತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದರು. ಇದಕ್ಕೆ ಬೋರಿಸ್‌ ಅವರು ಮಂಗಳವಾರ ಸಮ್ಮತಿ ಸೂಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಹೋದ ವರ್ಷ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಬೋರಿಸ್‌ ಅವರು ಭಾರತದ ಜೊತೆ ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಕೈಗೊಂಡಿರುವ ಮೊದಲ ಭೇಟಿ ಇದಾಗಿದೆ.

“ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ. ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಮೋದಿ ಹಾಗೂ ನಾನು ವಾಗ್ದಾನ ನೀಡಿದ್ದೆವು. ಈ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಡಲಿದ್ದೇವೆ. ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡುವುದೂ ನಮ್ಮ ಧ್ಯೇಯವಾಗಿದೆ. ವಾಣಿಜ್ಯ ವಹಿವಾಟು ಹಾಗೂ ಹೂಡಿಕೆ ಭವಿಷ್ಯದ ಬಗ್ಗೆಯೂ ವಿಚಾರ ವಿನಿಮಯ ನಡೆಸಲಿದ್ದೇವೆ’ ಎಂದು ಜಾನ್ಸನ್‌ ತಿಳಿಸಿದ್ದಾರೆ.

ಬೋರಿಸ್‌ ಅವರು ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿರುವ ಬ್ರಿಟನ್‌ನ ಎರಡನೇ ಪ್ರಧಾನಿಯಾಗಿದ್ದಾರೆ. 1993ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆಗ ಬ್ರಿಟನ್‌ ಪ್ರಧಾನಿಯಾಗಿದ್ದ ಜಾನ್‌ ಮೇಜರ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಬೋರಿಸ್‌ ಅವರ ಭಾರತ ಪ್ರವಾಸದ ಪೂರ್ಣ ವೇಳಾಪಟ್ಟಿ ಜನವರಿಯಲ್ಲಿ ಬಿಡುಗಡೆಯಾಗಲಿದೆ.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬೋರಿಸ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವುದನ್ನು ಬ್ರಿಟನ್‌ ನ ವಿದೇಶಾಂಗ ಕಾರ್ಯದರ್ಶಿ ಡಾಮಿನಿಕ್‌ ರಾಬ್‌ ಅವರೂ ದೃಢಪಡಿಸಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರೊಂದಿಗಿನ ಮಾತುಕತೆಯ ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ಹೇಳಿದ್ದಾರೆ.

Join Whatsapp
Exit mobile version