ನವದೆಹಲಿ : ಈ ತಿಂಗಳಾಂತ್ಯದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭಾರತಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕಾರ್ಯಕ್ರಮ ರದ್ದಾಗಿದೆ ಎಂದು ವರದಿಗಳು ತಿಳಿಸಿವೆ. ಬ್ರಿಟನ್ ತನ್ನ ಮೂರನೇ ಕೋವಿಡ್ 19 ಲಾಕ್ ಡೌನ್ ಅನ್ನು ಮಂಗಳವಾರ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಜ.26ರ ಕಾರ್ಯಕ್ರಮದಲ್ಲಿ ಬೋರಿಸ್ ಜಾನ್ಸನ್ ಭಾಗಿಯಾಗುವ ಬಗ್ಗೆ ಸಂದೇಹ ವ್ಯಕ್ತವಾಗಿತ್ತು.
ಇಂದು ಮುಂಜಾನೆ ಪ್ರಧಾನಿ ಮೋದಿ ಅವರ ಜೊತೆ ಬ್ರಿಟನ್ ಪ್ರಧಾನಿ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಈ ಹಿಂದೆ ಯೋಜಿಸಿದಂತೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದಕ್ಕೆ ವಿಷಾಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯೊಂದು ತಿಳಿಸಿದೆ.
ಇಂಗ್ಲೆಂಡ್ ನಲ್ಲಿ ಹೊಸ ರೂಪಾಂತರಿತ ಕೊರೊನ ವೈರಸ್ ಸೋಂಕು ಪತ್ತೆಯಾಗಿದ್ದು, ಅದನ್ನು ನಿಯಂತ್ರಿಸುವಲ್ಲಿ ಅಲ್ಲಿನ ಸರಕಾರ ಹರಸಾಹಸ ಪಡುತ್ತಿದೆ. ಈ ನಡುವೆ, ಮೂರನೇ ಹಂತದ ಕಠಿಣ ಲಾಕ್ ಡೌನ್ ಅನ್ನು ಇಂಗ್ಲೆಂಡ್ ನಲ್ಲಿ ಘೋಷಿಸಲಾಗಿದೆ.