ಬೆಂಗಳೂರು: ಕೇಂದ್ರ ಸರಕಾರ 18 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಕೋವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕೆಯಾಗಿ ಬೂಸ್ಟರ್ ಡೋಸ್ ಲಸಿಕೆ ನೀಡುವ ಅವಕಾಶ ಕಲ್ಪಿಸಿದ್ದು, ಏಪ್ರಿಲ್ 10, ನಾಳೆಯಿಂದಲೇ ಲಸಿಕೆ ಪಡೆಯಬಹುದಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.
ಕೇಂದ್ರ ಸರಕಾರದ ಈ ಕ್ರಮವನ್ನು ಪ್ರಶಂಸಿರುವ ರಾಜ್ಯ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಕೋವಿಡ್ ವಿರುದ್ಧದದ ಹೋರಾಟಕ್ಕೆ ಇದರಿಂದ ಇನ್ನಷ್ಟು ವೇಗ ಸಿಕ್ಕಿದೆ ಎಂದಿದ್ದಾರೆ.
ರಾಜ್ಯದಲಿ 18 ವರ್ಷ ಮೇಲ್ಪಟ್ಟವರು ಏಪ್ರಿಲ್ 10 ರಿಂದ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು. ಎರಡನೇ ಡೋಸ್ ಪಡೆದು 9 ತಿಂಗಳು ಪೂರ್ಣವಾಗಿದ್ದಲ್ಲಿ, ಈ ಹೆಚ್ಚುವರಿ ಡೋಸ್ ಪಡೆಯಬಹುದು ಎಂದು ಸಚಿವರು ತಿಳಿಸಿದ್ದಾರೆ.
ದೇಶದಲ್ಲಿ ಈವರೆಗೆ 185 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೆ 10.47 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದರ ಜೊತೆಗೆ, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟ ವಯಸ್ಸಿನ ನಾಗರಿಕರಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.