ಬುಕ್ಕಿಂಗ್ ಕ್ಯಾನ್ಸಲ್: ಮಹಿಳೆ ಮೇಲೆ ಹಲ್ಲೆ ನಡೆಸಿದ ಆಟೋ ಚಾಲಕ ವಶಕ್ಕೆ..!

Prasthutha|

- Advertisement -

ಬೆಂಗಳೂರು: ಆ್ಯಪ್ ಮೂಲಕ ಬುಕ್ ಮಾಡಿದ್ದ ರೈಡ್ ಅನ್ನು ಕ್ಯಾನ್ಸಲ್ ಮಾಡಿದ ನಂತರ ಆಟೋ ಚಾಲಕನೊಬ್ಬ ಕಿರುಕುಳ ನೀಡಿ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಿಟಿಝನ್ಸ್ ಮೂವ್ ಮೆಂಟ್ ಈಸ್ಟ್ ಬೆಂಗಳೂರು ಎಂಬ ಖಾತೆಯಿಂದ ಆಟೋ ಡ್ರೈವರ್ ಒಬ್ಬನ ದುರ್ವರ್ತನೆಯ ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಆ್ಯಪ್ ನಲ್ಲಿ ಆಟೋ ಬುಕ್ ಮಾಡಿ ರದ್ದು ಮಾಡಿ ಇನ್ನೊಂದು ಆಟೋದಲ್ಲಿ ಕುಳಿತಿದ್ದ ಮಹಿಳೆಯನ್ನು ಆಟೋ ಡ್ರೈವರ್ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಮಾತ್ರವಲ್ಲದೆ ಹಲ್ಲೆ ಸಹ ನಡೆಸಿದ್ದಾನೆ.

- Advertisement -

ವಿಡಿಯೋದಲ್ಲಿರುವ ಮಹಿಳೆ ಹಿಂದಿಯಲ್ಲಿ ಮಾತನಾಡುತ್ತಿದ್ದು, ತಾನು ಆಟೋ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದರಲ್ಲಿ ಏನು ತಪ್ಪಿದೆ? ನೀವು ಸಹ ನಿಮಗೆ ಬೇಡವಾದಲ್ಲಿ ಕ್ಯಾನ್ಸಲ್ ಮಾಡುತ್ತೀರಲ್ಲವೇ ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಗರಂ ಆದ ಆಟೋ ಡ್ರೈವರ್ ಗ್ಯಾಸಿನ ದುಡ್ಡು ಯಾರು ನಿಮ್ಮ ಅಪ್ಪ ಕೊಡುತ್ತಾನಾ ಎಂದು ತೀರಾ ಕೆಟ್ಟ ಪದಗಳಿಂದ ಬೈದಿದ್ದಾನೆ.

ನೀವು ಹೀಗೆ ಯಾಕೆ ಕಿರುಚುತ್ತಿದ್ದೀರಿ. ನಾನು ಪೊಲೀಸ್ ಕಂಪ್ಲೇಂಟ್ ಕೊಡುವೆ ಎಂದು ಆಕೆ ಹೇಳಿದಾಗ ಆಟೋ ಡ್ರೈವರ್, ನಡಿ ಪೊಲೀಸ್ ಸ್ಟೇಷನ್ ಗೆ ಹೋಗೋಣ ಎಂದು ದಬಾಯಿಸಿದ್ದಾನೆ. ಅದಕ್ಕೆ ಆಕೆ ಈಗ ನಾನು ನಿಮ್ಮ ಜೊತೆ ಯಾಕೆ ಪೊಲೀಸ್ ಸ್ಟೇಷನ್ ಗೆ ಬರಲಿ. ನಿಮ್ಮ ನಂಬರ್, ವಿವರಗಳೆಲ್ಲಾ ನಮ್ಮ ಬಳಿ ಇವೆ. ನಿಮ್ಮ ವಿರುದ್ಧ ಕಂಪ್ಲೇಂಟ್ ಮಾಡುವೆ ಎಂದು ಎಚ್ಚರಿಕೆ ನೀಡಿದ್ದಾಳೆ. ಆ ವೇಳೆ ಮತ್ತಷ್ಟು ರೊಚ್ಚಿಗೆದ್ದ ಆತ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.

‘ಈ ಕುರಿತು ಓಲಾ ಪ್ರತಿಕ್ರಿಯಿಸಿದ್ದು, ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. ”ಇದು ಸಾಕಷ್ಟು ಆತಂಕಕಾರಿಯಾಗಿದೆ. ಚಿಂತಿಸಬೇಡಿ, ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ”ಎಂದು ಹೇಳಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಭರವಸೆ ನೀಡಿದ್ದಾರೆ.’ಇಂತಹ ನಡವಳಿಕೆಯನ್ನು ಸ್ವೀಕಾರಾರ್ಹವಲ್ಲ. ಇಂತಹ ಕೆಲವು ಜನರು ಆಟೋ ಚಾಲಕರ ಸಮುದಾಯಕ್ಕೆ ಕೆಟ್ಟ ಹೆಸರನ್ನು ತರುತ್ತಾರೆ’ ಎಂದು ಪ್ರತಿಕ್ರಿಯಿಸಿದ್ದರು. ಅದರಂತೆ ಚಾಲಕನನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.



Join Whatsapp
Exit mobile version