Home ಟಾಪ್ ಸುದ್ದಿಗಳು ಬೊಮ್ಮಾಯಿ ಕೂಡಾ ಲಕ್ಕಿಡಿಪ್ ಸಿಎಂ: ಬಿಜೆಪಿಗೆ ಟಾಂಗ್ ಕೊಟ್ಟು ಪರಿವಾರ ಪುರಾಣದ ಪಟ್ಟಿ ಬಿಡುಗಡೆ ಮಾಡಿದ...

ಬೊಮ್ಮಾಯಿ ಕೂಡಾ ಲಕ್ಕಿಡಿಪ್ ಸಿಎಂ: ಬಿಜೆಪಿಗೆ ಟಾಂಗ್ ಕೊಟ್ಟು ಪರಿವಾರ ಪುರಾಣದ ಪಟ್ಟಿ ಬಿಡುಗಡೆ ಮಾಡಿದ ಎಚ್ ಡಿಕೆ

ಬೆಂಗಳೂರು : ಆಪರೇಷನ್ ಕಮಲ, ಸಿಎಂ ಮತ್ತು ಲಕ್ಕಿಡಿಪ್ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಹೆಚ್ ಡಿಕೆ  ಹೌದು. ನಾನು ಲಕ್ಕಿಡಿಪ್‌ ಸಿಎಂ, ಏನೀಗ , ಈಗ ಪಟ್ಟದಲ್ಲಿ ಕೂತಿರುವ ನಿಮ್ಮ ಸಿಎಂ ಅವರೇನು ಚುನಾವಣೆಯಲ್ಲಿ ಜನಾದೇಶ ಪಡೆದ ಘೋಷಿತ ಮುಖ್ಯಮಂತ್ರಿಯಾ , ಅವರೂ ಲಕ್ಕಿಡಿಪ್ಪು ಎಂಬುದನ್ನು ಮರೆತರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ನನಗೆ ಲಕ್ಕಡಿಪ್‌ ಸಿಎಂ ಎಂದರೆ ಅಪಮಾನವೇನೂ ಅಲ್ಲ. ಆಕಸ್ಮಿಕ ಮುಖ್ಯಮಂತ್ರಿ ಎಂದು ನಾನೇ ಅನೇಕ ಸಲ ಹೇಳಿದ್ದೇನೆ. ಆದರೆ, ʼಆಪರೇಷನ್‌ ಕಮಲದ ಸಿಎಂʼ ಎನ್ನುವುದಕ್ಕಿಂತಾ ಕೀಳಾ ಅದು? ಯಾವುದು ಮೇಲು? ಯಾವುದು ಕೀಳು? ಸ್ವಲ್ಪ ಹೇಳಿ ಎಂದು ಪ್ರಶ್ನಿಸಿದ್ದಾರೆ. ಮುಂದುವರಿದು  ಅಧಿಕಾರದ ನೆರಳೂ ಕಾಣದೆ ಬೆಂಗೆಟ್ಟಿದ್ದ ಬಿಜೆಪಿಗೆ ರಾಜ್ಯದಲ್ಲಿ ಕುರ್ಚಿರುಚಿ ತೋರಿಸಿದ ಅಂದಿನ 20:20 ಸರಕಾರದ ಡಿಸಿಎಂ ಆಗಿದ್ದ ನಿಮ್ಮವರನ್ನೇ ಕೇಳಿ. ನಿಮ್ಮಲ್ಲೆಷ್ಟು ಲಕ್ಕಿಡಿಪ್‌ʼಗಳಿದ್ದಾರೆ ಎಂಬುದನ್ನು ಅವರೇ ಹೇಳುತ್ತಾರೆ, ಸತ್ಯ ಸಾಕ್ಷಾತ್ಕಾರ ಮಾಡಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದಲ್ಲಿ ನೀವು ಅಧಿಕಾರಕ್ಕೆ ಬಂದಿದ್ದೇ ಜೆಡಿಎಸ್‌ ಕೃಪೆಯಿಂದ. ಸ್ವಪಕ್ಷವನ್ನೇ ಒಡೆದು ನನ್ನ ಜತೆ ಬರಲು ಸಿದ್ದರಿದ್ದ ಆ ನಿಮ್ಮ ನಾಯಕರನ್ನು ನಾನು ತಡೆಯದೇ ಇದ್ದಿದ್ದರೆ, ನೀವು ಮತ್ತು ನಿಮ್ಮ ಪಕ್ಷ ಆವತ್ತೇ ನಡುನೀರಿನಲ್ಲಿ ಮುಳುಗಿಹೋಗುತ್ತಿದ್ದಿರಿ. ಅನುಮಾನ ಇದ್ದರೆ ಒಮ್ಮೆ ಅವರನ್ನೇ ಕೇಳಿ. ನನ್ನ ನಡುಕದ ಬಗ್ಗೆ ಆಮೇಲೆ ಮಾತನಾಡಿ ಎಂದು ಟಕ್ಕರ್ ಕೊಟ್ಟಿದ್ದಾರೆ.

ಕುಟುಂಬ ರಾಜಕಾರಣದ ಕೊಂಡಿಗಳ ಬಗ್ಗೆ ಹೇಳಿದ್ದೀರಿ. ಈಗಾಗಲೇ ಪಟ್ಟಿ ಕೊಟ್ಟಿದ್ದೇನೆ ಮತ್ತೆ ನಿಮ್ಮ ಅವಗಾಹನೆಗೆ ಎಂದು ಹಲವರ ಹೆಸರನ್ನು ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಯಡಿಯೂರಪ್ಪ & ಸನ್ಸ್‌, ರವಿ ಸುಬ್ರಹ್ಮಣ್ಯ-ತೇಜಸ್ವಿಸೂರ್ಯ, ಅಶೋಕ್-ರವಿ, ವಿ.ಸೋಮಣ್ಣ-ಅರುಣ್‌ ಸೋಮಣ್ಣ, ಅರವಿಂದ ಲಿಂಬಾಳಿ-ರಘು, ಎಸ್.ಆರ್.ವಿಶ್ವನಾಥ್-ವಾಣಿ ವಿಶ್ವನಾಥ್‌, ಜಗದೀಶ ಶೆಟ್ಟರ್-ಪ್ರದೀಪ್‌ ಶೆಟ್ಟರ್‌, ಮುರುಗೇಶ ನಿರಾಣಿ-ಹನುಮಂತ ನಿರಾಣಿ, ಜಿ.ಎಸ್.ಬಸವರಾಜು-ಜ್ಯೋತಿ ಗಣೇಶ್, ಜಾರಕಿಹೊಳಿ ಕುಟುಂಬ, ಕತ್ತಿ ಕುಟುಂಬ, ಜೊಲ್ಲೆ ಕುಟುಂಬ, ಅಂಗಡಿ ಕುಟುಂಬ, ಉದಾಸಿ ಕುಟುಂಬ, ಶ್ರೀರಾಮುಲು ಕುಟುಂಬ , ರೆಡ್ಡಿ ಬ್ರದರ್ಸ್‌ ಹೀಗೆ  ನಿಮ್ಮ ಪರಿವಾರ ಪುರಾಣ ಇನ್ನೂ ಇದೆ.

ರಾಷ್ಟ್ರವ್ಯಾಪಿ ಕಮಲದ ಕುಟುಂಬವ್ಯಾಧಿ ಕೊಂಡಿಗಳನ್ನು ಬಿಚ್ಚಬೇಕೆ? ನೀವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗೌರಿಶಂಕರದಷ್ಟು ಎತ್ತರ ಕಾಣುವ ʼಬಿಜೆಪಿ ಪರಿವಾರ ಪರ್ವತʼಗಳ ಬಗ್ಗೆ ಹೇಳಬೇಕಾದರೆ ‘ಪರಿವಾರಕೋಟಿ’ಯನ್ನೇ ಬರೆಯಬಹುದು ಎಂದು ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ

Join Whatsapp
Exit mobile version