ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಸದನದ ಒಳಗೂ ಹೊರಗೂ ನಾನು ಮತ್ತು ಮಾಜಿ ಸಿಎಂ ಬೊಮ್ಮಾಯಿ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಶಪಥ ಮಾಡಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.
ಈ ವೇಳೆ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ, ವಿರೋಧ ಪಕ್ಷದಲ್ಲಿ ನಾನು ಇದ್ದೇನೆ, ಬೊಮ್ಮಾಯಿ ಅವರೂ ಇದ್ದಾರೆ. ನಾಡಿನ ಹಿತಾಸಕ್ತಿ ಕಾಪಾಡುವ ಸಲುವಾಗಿ ಹೋರಾಟ ಮಾಡಲು ನಾವು ಒಗ್ಗಟ್ಟಾಗಿ ಹೋಗುತ್ತಿದ್ದೇವೆ ಎಂದಿದ್ದಾರೆ. ಕಾಂಗ್ರೆಸ್ ನವರಿಗೆ ಸರ್ಕಾರ ಬೇಕಿಲ್ಲ. ಭೂಮಿ ಲಪಟಾಯಿಸೋದು ಬೇಕು. ಇದು ಒಂದು ರೀತಿ ಈಸ್ಟ್ ಇಂಡಿಯಾ ಕಂಪನಿಯ ಆಡಳಿತ. ಸರ್ಕಾರಕ್ಕೆ ನಿಜಕ್ಕೂ ಜನತೆಗೆ, ರೈತರಿಗೆ ಒಳ್ಳೆಯದು ಮಾಡಬೇಕು ಅನ್ನೋ ಮನಸ್ಸಿದ್ದರೆ ಸರ್ಕಾರ ಸುಪರ್ದಿಗೆ ಬರಬೇಕಾದ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳಿ. ನನ್ನ ಪಕ್ಷದವ ಆಸ್ತಿ ಇದ್ದರೂ ಮುಟ್ಟುಗೋಲು ಹಾಕಿಕೊಳ್ಳಿ ಎಂದರಲ್ಲದೇ ಅಕ್ರಮ ಭೂಕಬಳಿಕೆ ಬಯಲಿಗೆಳೆಯಬೇಕಾದ್ರೆ ಈ ತನಿಖೆಯನ್ನ ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ.
ಸದನ ಹೇಗೆ ನಡೆಯುತ್ತಿದೆ ಅನ್ನೋದನ್ನ ಗಮನಿಸಿದ್ದೀರಿ. ಸದನದ ಕಲಾಪದ ಮೌಲ್ಯಗಳು ಕುಸಿಯುತ್ತಿವೆ. ಶಿಷ್ಟಾಚಾರದ ಹೆಸರಲ್ಲಿ ಅಧಿಕಾರಿಗಳ ದುರುಪಯೋಗ ಆಗಿದೆ. ಐಎಎಸ್ ನಿವೃತ್ತ ಅಧಿಕಾರಿ ಮದನ್ ಗೋಪಾಲ್ ಅವರೂ ಇದನ್ನೇ ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.