Home ಟಾಪ್ ಸುದ್ದಿಗಳು ಆರ್.ಎಸ್.ಎಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಬೊಮ್ಮಾಯಿ ಸರ್ಕಾರ: ಸಿದ್ದರಾಮಯ್ಯ

ಆರ್.ಎಸ್.ಎಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಬೊಮ್ಮಾಯಿ ಸರ್ಕಾರ: ಸಿದ್ದರಾಮಯ್ಯ

ಮಂಡ್ಯ: ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 2013 ರವರೆಗೆ ದೇಶದ ಒಟ್ಟು ಸಾಲ 53 ಲಕ್ಷ ಕೋಟಿ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಏಳು ವರ್ಷಗಳಲ್ಲೇ ಈ ಸಾಲ 135 ಲಕ್ಷ ಕೋಟಿಗೆ ಏರಿದೆ. ಇದೇನಾ ಅಚ್ಚೇ ದಿನ್? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


ಅವರು ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರದಲ್ಲಿ ಕೆಪಿಸಿಸಿ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದಾಗಿನಿಂದ ನಾವು ಅಧಿಕಾರದಲ್ಲಿದ್ದ ಕೊನೇ ವರ್ಷದ ವರೆಗೆ ಇದ್ದ ರಾಜ್ಯದ ಒಟ್ಟು ಸಾಲ 2 ಲಕ್ಷದ 45 ಸಾವಿರ ಕೋಟಿ ರೂಪಾಯಿ. ಈಗಿನ ಬಿಜೆಪಿ ಸರ್ಕಾರದ ಎರಡು ವರ್ಷದ ದುರಾಡಳಿತದಿಂದ ಈ ಸಾಲ 4 ಲಕ್ಷದ 57 ಸಾವಿರ ಕೋಟಿಗೆ ಏರಿಕೆಯಾಗಿದೆ. ಅಭಿವೃದ್ಧಿ ಮೇಲೆ ಮತ ಕೇಳುತ್ತೇವೆ ಎನ್ನುವ ಬೊಮ್ಮಾಯಿ ಅವರ ಆಡಳಿತದಲ್ಲಿ ಸಾಲದ ಪ್ರಮಾಣ ಮಾತ್ರ ಬೆಳವಣಿಗೆ ಆಗುತ್ತಿದೆ ಎಂದು ಹೇಳಿದರು.


ದೇಶವನ್ನು ಉಳಿಸುವುದಕ್ಕಾಗಿ ನಾವೆಲ್ಲಾ ಕಾಂಗ್ರೆಸ್ ಪಕ್ಷವನ್ನು ಉಳಿಸಬೇಕಿದೆ, ಬೆಳೆಸಬೇಕಿದೆ. ಕಾಂಗ್ರೆಸ್ ನಮ್ಮ ನಿಮ್ಮೆಲ್ಲರ, ಜನ ಸಾಮಾನ್ಯರ ಪಕ್ಷ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ಪಕ್ಷವನ್ನು ಬಲಪಡಿಸಲು ಒಂದಾಗಿ ದುಡಿಯೋಣ ಎಂದು ಕರೆ ನೀಡಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಗಿ ಇಂದಿಗೆ 136 ವರ್ಷಗಳು ತುಂಬಿದೆ. ಭಾರತೀಯರ ಕಷ್ಟ ಸುಖಗಳನ್ನು ಆಲಿಸಲು, ಹಕ್ಕುಗಳ ರಕ್ಷಣೆಗಾಗಿ ಸ್ಥಾಪನೆಯಾದ ಕಾಂಗ್ರೆಸ್ ಪಕ್ಷ ನಂತರ ದೇಶದ ಸ್ವಾತಂತ್ರ್ಯ ಹೋರಾಟದ ಮುಂದಾಳತ್ವ ವಹಿಸಿಕೊಂಡಿತು. 1915ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಗೋಪಾಲ ಕೃಷ್ಣ ಗೋಖಲೆ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಬಂದ ಮಹಾತ್ಮ ಗಾಂಧಿ ಅವರು ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣ ತೊಡಗಿಸಿಕೊಂಡರು. ಆ ನಂತರ ಸ್ವಾತಂತ್ರ್ಯ ಚಳವಳಿ ತೀವ್ರತೆಯನ್ನು ಪಡೆದುಕೊಂಡಿತು ಎಂದು ಹೇಳಿದರು.


ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಲ್ಲಿ ನಡೆಸಿದ ಹೋರಾಟ ಮತ್ತು ಸ್ವಾತಂತ್ರ್ಯ ನಂತರ ದೇಶ ನಿರ್ಮಾಣದತ್ತ ನಡೆಸಿದ ಹೋರಾಟ ಹೀಗೆ ಎರಡು ರೀತಿಯ ಇತಿಹಾಸ ಹೊಂದಿದೆ. ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸವೂ ಆಗಿದೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿಯವರ ಕೊಡುಗೆ ಶೂನ್ಯ. ನರೇಂದ್ರ ಮೋದಿ ಅವರು ಅರವತ್ತು ವರ್ಷ ದೇಶವನ್ನಾಳಿದ ಕಾಂಗ್ರೆಸ್ ನ ಕೊಡುಗೆ ಏನು ಎಂದು ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ. ಬಹುಶಃ ಅವರಿಗೆ ದೇಶದ ಇತಿಹಾಸ ಜ್ಞಾನದ ಕೊರತೆಯಿರಬಹುದು. ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು ಎಂದು ನಾನೀಗ ಅವರನ್ನೇ ಪ್ರಶ್ನೆ ಮಾಡುತ್ತೇನೆ. ಉತ್ತರ ಕೊಡಲಿ. ದೇಶದ ಜನರಿಗೆ ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕ ಸ್ವಾತಂತ್ರ್ಯ ನೀಡಿರುವುದು ಕಾಂಗ್ರೆಸ್ ಪಕ್ಷ. ಹೀಗಾಗಿ ಕಾಂಗ್ರೆಸ್ ಪಕ್ಷದ ಸದಸ್ಯನಾಗಿರುವುದೇ ಒಂದು ಹೆಮ್ಮೆಯ ವಿಷಯ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮಾಹಿತಿ ಹಕ್ಕು, ಉದ್ಯೋಗ ಖಾತ್ರಿ, ಶಿಕ್ಷಣದ ಹಕ್ಕು, ಆಹಾರ ಭದ್ರತೆ ಕಾನೂನುಗಳನ್ನು ಜಾರಿಗೊಳಿಸಿ, ದೇಶದ ಆರ್ಥಿಕತೆಯನ್ನು ಸದೃಢ ಗೊಳಿಸಿದ್ದರು. ನರೇಂದ್ರ ಮೋದಿ ಅವರು ದೇಶದ ಬೆನ್ನೆಲುಬಾದ ಕೃಷಿಯನ್ನೇ ನಾಶ ಮಾಡಲು ಮೂರು ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ, ಕೆಲವು ದಿನಗಳ ಹಿಂದೆ ರೈತರ ಹೋರಾಟಕ್ಕೆ ಹೆದರಿ ಮತ್ತು ಚುನಾವಣೆಯಲ್ಲಿ ಸೋತ ಕಾರಣಕ್ಕೆ ವಾಪಾಸು ಪಡೆದಿದ್ದಾರೆ ಎಂದು ಆರೋಪಿಸಿದರು.

ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತೀಯರು ರಾಷ್ಟ್ರ ಧ್ವಜವನ್ನು ಹಾರಿಸಬಾರದು ಎಂದು ಕಾನೂನು ತಂದರು, ಇದರ ವಿರುದ್ಧ ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರದಲ್ಲಿ ಧ್ವಜಾರೋಹಣ ಮಾಡುವ ಮೂಲಕ ದೊಡ್ಡ ಚಳವಳಿಯನ್ನೇ ಆರಂಭಿಸಲಾಯಿತು. ಲಕ್ಷಾಂತರ ಜನ ಬ್ರಿಟಿಷರ ಗುಂಡಿಗೆ, ಲಾಠಿ ಏಟಿಗೆ ಎದೆ ಕೊಟ್ಟು ನಿಂತು ತ್ಯಾಗ ಬಲಿದಾನಗೈದಿದ್ದರಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಇವತ್ತು ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದರೆ ಅದಕ್ಕೆ ಸಂವಿಧಾನ ಮತ್ತು ನಮ್ಮ ನಾಯಕರು ನಡೆಸಿದ ಸ್ವಾತಂತ್ರ್ಯ ಹೋರಾಟ ಕಾರಣ. 1925 ರಲ್ಲೇ ಆರ್ .ಎಸ್.ಎಸ್ ಸ್ಥಾಪನೆಯಾದರೂ ಅವರ್ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ. ಯಾವೊಬ್ಬ ಆರ್.ಎಸ್.ಎಸ್ ನಾಯಕ ಸ್ವಾತಂತ್ರ್ಯಕ್ಕಾಗಿ ಹುತಾತ್ಮನಾಗಿಲ್ಲ. ಇಂಥವರು ನಮಗೆ ಸ್ವಾತಂತ್ರ್ಯ ಹೋರಾಟ, ದೇಶಪ್ರೇಮದ ಪಾಠ ಮಾಡಲು ಬರುತ್ತಾರೆ ಎಂದು ಹರಿಹಾಯ್ದರು.


ನಾವೀಗ ಎಂದಿಗಿಂತ ಹೆಚ್ಚು ಹುರುಪಿನೊಂದಿಗೆ ಜನರ ಬಳಿ ಹೋಗಿ ಕಾಂಗ್ರೆಸ್ ಅನ್ನು ಬೆಂಬಲಿಸುವಂತೆ ಕೇಳಬೇಕು. ಹಿಂದಿನ ನಮ್ಮ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಅಭಿವೃದ್ಧಿಗೆ ಎಸ್.ಸಿ.ಪಿ/ಟಿ.ಎಸ್.ಪಿ ಕಾನೂನು ಜಾರಿಗೆ ತಂದು, ಅವರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗುವಂತೆ ಮಾಡಿದೆವು, ಸರ್ಕಾರಿ ಟೆಂಡರ್ ಗಳಲ್ಲಿ ಈ ಸಮುದಾಯಗಳಿಗೆ ಮೀಸಲಾತಿ ನೀಡಿ ಅವರ ಆರ್ಥಿಕ ಏಳಿಗೆಗೆ ಸಹಕಾರಿಯಾಗಿದ್ದೆವು. ಈಗಿನ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾನೂನು, ಮತಾಂತರ ನಿಷೇಧ ಕಾಯ್ದೆ ಮುಂತಾದ ಭಾವನಾತ್ಮಕ ವಿಷಯಗಳ ಬಗ್ಗೆ ಮಾತ್ರ ಕಾನೂನು ರೂಪಿಸುತ್ತಿದೆ. ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ಅವರು ಉಳುವವನೆ ಭೂಮಿಯ ಒಡೆಯ ಎಂಬ ಕಾನೂನು ತಂದಿದ್ದರೆ, ಬಿಜೆಪಿ ಸರ್ಕಾರ ಬಂದು ಉಳ್ಳವರನ್ನೇ ಭೂಮಿಯೊಡೆಯ ಮಾಡಿದೆ. ನಾವು ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು ಹಟ್ಟಿಗಳು, ತಾಂಡಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿದೆವು. ಈ ಬಿಜೆಪಿ ಸರ್ಕಾರ ಆರ್.ಎಸ್.ಎಸ್ ಹಾಕುವ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಸಂವಿಧಾನ ವಿರೋಧಿ ಕಾನೂನುಗಳನ್ನು ಜಾರಿ ಮಾಡುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Join Whatsapp
Exit mobile version