ಬೆಂಗಳೂರು: ಸ್ವಾತಂತ್ರ್ಯ ಬಂದಾಗಿನಿಂದ 55 ವರ್ಷ ದೇಶ ಆಳಿರುವ ಕಾಂಗ್ರೆಸ್ ಅವಧಿಯಲ್ಲಿ ರಾಜ್ಯಗಳಿಗೆ ಕೇವಲ ಶೇ 20 ರಷ್ಟು ಮಾತ್ರ ಅನುದಾನ ಬರುತ್ತಿತ್ತು, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ರಾಜ್ಯಗಳಿಗೆ ಶೇ 42% ರಷ್ಟು ಅನುದಾನ ಬರುತ್ತಿದೆ. ಕಾಂಗ್ರೆಸ್ ನವರು ಕೇಂದ್ರದ ವಿರುದ್ದ ಅನಗತ್ಯ ಆರೋಪ ಮಾಡಿ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಮಂಡಿಸಿರುವ ನಿರ್ಣಯದ ವಿರುದ್ಧ ಇಂದು ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ದ ನಿರ್ಣಯ ಮಂಡಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ದ ನಿರ್ಣಯ ಮಂಡಿಸಿ ವಿಧಾನಸಭೆಯ ಪಾವಿತ್ರ್ಯತೆಯನ್ನು ಹಾಳು ಮಾಡಿ ಸುಳ್ಳು ಹೇಳುವ ದಾಷ್ಟ್ಯ ತೋರಿದೆ. ಕೇಂದ್ರದಿಂದ ಅನ್ಯಾಯವಾಗಿದೆ ಅಂತ ರಾಜ್ಯದ ಜನರ ದಾರಿ ತಪ್ಪಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ತೆರಿಗೆ ಕಾಂಗ್ರೆಸ್ ಆಡಳಿತದಲ್ಲಿ 20% ರಷ್ಟು ಮಾತ್ರ ಇತ್ತು. ಆಗ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ದಕ್ಷಿಣ ಭಾರತದ ಅನೇಕ ನಾಯಕರು ಸೇರಿ ರಾಜ್ಯಗಳ ತೆರಿಗೆ ಹೆಚ್ಚಳ ಮಾಡುವಂತೆ ಹೋರಾಟ ಮಾಡಲಾಯಿತು. ಆದರೆ, ಯುಪಿಎ ಅವಧಿಯಲ್ಲಿ ರಾಜ್ಯಗಳ ತೆರಿಗೆ ಅನುದಾನ ಹೆಚ್ಚಳ ಮಾಡಲು ನಿರಾಕರಿಸಿದ್ದರು. ನರೇಂದ್ರ ಮೋದಿಯವರು ಬಂದು ಕೆಲವೇ ವರ್ಷದಲ್ಲಿ ರಾಜ್ಯಗಳ ತೆರಿಗೆ ಪಾಲನ್ನು ಶೇ 32% ರಿಂದ ಶೇ 42% ಕ್ಕೆ ಹೆಚ್ಚಳಮಾಡಿದ್ದಾರೆ ಎಂದು ವಿವರಿಸಿದರು.