ಮುಂಬೈ: ಅಶ್ಲಿಲ ಚಿತ್ರ ನಿರ್ಮಾಣ ಸಂಬಂಧ ರಾಜ್ ಕುಂದ್ರಾ ಮೇಲೆ ಹೂಡಿರುವ ಮೊಕದ್ದಮೆ ಸಂಬಂಧವಾಗಿ ಅವರ ಬಂಧನಕ್ಕೆ ಮಧ್ಯಂತರ ತಡೆ ವಿಧಿಸಿ ಬುಧವಾರ ಬಾಂಬೆ ಹೈಕೋರ್ಟ್ ಆದೇಶಿಸಿದೆ. ಕುಂದ್ರಾ ಸಲ್ಲಿಸಿದ್ದ ಬಂಧನ ಪೂರ್ವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಏಕ ನ್ಯಾಯಾಧೀಶ ಎಸ್. ಕೆ. ಶಿಂದೆ ಅವರಿದ್ದ ಪೀಠವು ಈ ಮಧ್ಯಂತರ ರಕ್ಷಣೆ ನೀಡಿ, ಆಗಸ್ಟ್ 25ರಂದು ಈ ಸಂಬಂಧ ಹೇಳಿಕೆ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿತು.
ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕೆಲವು ಮೊಬೈಲ್ ಆ್ಯಪ್ ಗಳ ಮೂಲಕ ಅಶ್ಲೀಲ ಚಿತ್ರ ನಿರ್ಮಿಸಿ ವಿತರಣೆ ಮಾಡಿದ್ದರ ಸಂಬಂಧದ ಇನ್ನೊಂದು ಕೇಸಿನಲ್ಲಿ ಜೈಲಿನಲ್ಲಿ ಇದ್ದಾರೆ. 2020ರ ಮೊಕದ್ದಮೆಗೆ ಸಂಬಂಧಿಸಿದಂತೆ ಕುಂದ್ರಾ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಈ ಮೊಕದ್ದಮೆಯಲ್ಲಿ ಇನ್ನೊಬ್ಬ ಆರೋಪಿಗೆ ಜಾಮೀನು ನೀಡಲಾಗಿದೆ, ಆದ್ದರಿಂದ ನನಗೂ ಜಾಮೀನು ನೀಡಬೇಕು ಎಂದು ಕೋರಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಜಾಕ್ತ ಅವರು ಈ ಮೊಕದ್ದಮೆಯಲ್ಲಿ ಕುಂದ್ರಾರ ಪಾತ್ರವು ಇನ್ನೊಬ್ಬಆರೋಪಿಗಿಂತ ಭಿನ್ನವಾಗಿರುವುದರಿಂದ ಜಾಮೀನು ಕೊಡಬಾರದು ಎಂದು ವಾದಿಸಿದರು. ಹೆಚ್ಚಿನ ಸೂಚನೆಗಳನ್ನು ಪಡೆಯಲು ಕಾಲಾವಕಾಶ ಅಗತ್ಯ ಎಂದೂ ಪ್ರಜಾಕ್ತ ಕೇಳಿದರು. ಆಗ ಮಧ್ಯಂತರ ಬಂಧನ ತಡೆ ಆದೇಶ ನೀಡಿದ ನ್ಯಾಯಾಧೀಧಶರು, ಆಗಸ್ಟ್ 25ಕ್ಕೆ ವಿಚಾರಣೆ ಮುಂದೂಡಿದರು.
ಓಟಿಟಿ ಮೂಲಕ ನಗ್ನ ಫೋಟೋಗಳನ್ನು ಕುಂದ್ರಾ ಅಪ್ ಲೋಡ್ ಮಾಡಿದ್ದಾರೆ ಎಂದು ಅವರ ಮೇಲೆ 2020ರ ಅಕ್ಟೋಬರಿನಲ್ಲಿ ಮುಂಬಯಿ ಸೈಬರ್ ಕ್ರೈಂ ಪೊಲೀಸರು ಎಫ್ ಐ ಆರ್ ಸಲ್ಲಿಸಿದ್ದರು. ನನ್ನನ್ನು ತಪ್ಪಾಗಿ ಈ ಕೇಸಿನಲ್ಲಿ ಸಿಕ್ಕಿಸಲಾಗಿದೆ ಎಂದು ಕುಂದ್ರಾ ಅರ್ಜಿ ಸಲ್ಲಿಸಿದ್ದರು. ನನ್ನ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ, ಯಾವ ನಟಿಯೂ ನನ್ನ ಬಗೆಗೆ ದೂರಿಲ್ಲ ಎಂದೂ ಕುಂದ್ರಾ ಜಾಮೀನು ಅರ್ಜಿಯಲ್ಲಿ ಹೇಳಿದ್ದರು.