ಬೆಂಗಳೂರು: ಕೋಲ್ಕತ್ತಾದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೋ ವಿಮಾನದ ಸೀಟ್ವೊಂದರಲ್ಲಿ ಸಿಕ್ಕ ಟಿಶ್ಯೂ ಪೇಪರ್’ನಲ್ಲಿ ಬಾಂಬ್ ಬೆದರಿಕೆ ಸಂದೇಶ ಇರುವುದು ಪತ್ತೆಯಾಗಿದ್ದು ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.
ವಿಷಯ ತಿಳಿದ ತಕ್ಷಣ ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ತಿಳಿದು ಬಂದಿದೆ.
ಬೆಂಗಳೂರು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಿಂದ 6ಇ 379 ಇಂಡಿಗೋ ಟೆಕ್ ಆಫ್ ಆಗಿ ಬೆಳಗ್ಗೆ 8:10ಕ್ಕೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲುಗಡೆಯಾಗಿದೆ.
ವಿಮಾನದಲ್ಲಿ ಬಾಂಬ್ ಬೆದರಿಕೆ ಸಂದೇಶ ಇರುವ ಮಾಹಿತಿ ಇಂಡಿಗೋ ಸಿಬ್ಬಂದಿಗೆ ತಿಳಿದು ಬಂದಿದೆ. ತಕ್ಷಣವೇ ಭದ್ರತಾ ಸಿಬ್ಬಂದಿ ಕರೆದು ತಪಾಸಣೆ ನಡೆಸಲಾಯಿತು. 6ಡಿ ಸೀಟ್ ಬಳಿ ದೊರೆತ ಟಿಶ್ಯೂ ಪೇಪರ್’ನಲ್ಲಿ ನೀಲಿ ಅಕ್ಷರಗಳಲ್ಲಿ ಬಾಂಬ್ ಬೆದರಿಕೆಯ ಸಂದೇಶ ಇತ್ತು ಎನ್ನಲಾಗಿದೆ.
ಬಾಂಬ್ ನಿಷ್ಕ್ರಿಯ ದಳದವರು ವಿಮಾನವನ್ನು ಸಂಪೂರ್ಣ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ತಿಳಿದು ಬಂದಿದೆ. ಏರ್’ಪೋರ್ಟ್ ಸಿಬ್ಬಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.