ಬೆಂಗಳೂರು: ನಗರ ಹಾಗೂ ಹೊರವಲಯದ ಖಾಸಗಿ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇಮೇಲ್
ಕಳುಹಿಸಿದ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಗಳು ತೀವ್ರಗೊಳಿಸಿವೆ.
ಮೊದಲಿಗೆ ನಗರದ ಆರು ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆಯ ಮೇಲ್ ಬಂದಿತ್ತು. ನಂತರ ಕರೆ ಬಂದ ಶಾಲೆಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಏಪ್ರಿಲ್ 9ಕ್ಕೆ ಹೊಸ ಮೂರು ಶಾಲೆಗಳಿಗೆ ಇ-ಮೇಲ್ ಮಾಡಿರುವುದು ಪತ್ತೆಯಾಗಿತ್ತು.
ಪ್ರಕರಣಕ್ಕೆ ಸಂಬಂಧ ವಿಪಿಎನ್ ಬಳಸಿ ಮೇಲ್ ಮಾಡಿರುವ ಸಂಶಯ ಪೊಲೀಸ್ ತಂಡಗಳಿಗೆ ವ್ಯಕ್ತವಾಗಿದ್ದು, ವಿಪಿಎನ್ ಪ್ರೊವೈಡರ್ ಗೆ ಪೊಲೀಸರು ಮಾಹಿತಿಯನ್ನು ಕೇಳಿದ್ದಾರೆ.
ಸಂಜೆಯೊಳಗೆ ಮಾಹಿತಿ ಪೊಲೀಸರ ಕೈಸೇರುವ ಸಾಧ್ಯತೆಯಿದೆ. ಇನ್ನು ಬೇರೆ ಬೇರೆ ದೇಶಗಳ ಐಡಿ ಬಳಸಿರುವ ಬಗ್ಗೆಯೂ ಶಂಕೆ ಮೂಡಿದ್ದು ಪೊಲೀಸರು ಗೂಗಲ್ ನಿಂದ ಕೆಲ ಮಾಹಿತಿ ಪಡೆದಿದ್ದಾರೆ.
ಬೆದರಿಕೆ ಇ-ಮೇಲ್ಗಳ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಇ-ಮೇಲ್ ರಿಜಿಸ್ಟ್ರೇಷನ್ ಮಾಹಿತಿ, ಲಾಗಿನ್ ಮಾಹಿತಿ, ಇ-ಮೇಲ್ ಡ್ರಾಫ್ಟ್, ಇ-ಮೇಲ್ ಇನ್ ಬಾಕ್ಸ್ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ಸರ್ವರ್ ಪ್ರೊವೈಡರ್ ಬಳಿ ಪೊಲೀಸರು 11 ಪ್ರಶ್ನೆ ಕೇಳಿದ್ದು, ಗೂಗಲ್ ಪೊಲೀಸ್ ಅಧಿಕಾರಿಗಳಿಗೆ ಬಾಂಬ್ ಬೆದರಿಕೆ ಮೇಲ್ ಐಪಿ ವಿಳಾಸ ಕೊಟ್ಟಿದೆ. ದಕ್ಷಿಣ ಕೊರಿಯಾ, ಮೊರಾಕ್ಕೊ, ಜೋರ್ಡನ್ ಐಪಿ ವಿಳಾಸಗಳನ್ನು ನೀಡಿರುವ ಬಗ್ಗೆ ಮಾಹಿತಿ ಇದೆ. ಬೇರೆ ಬೇರೆ ದೇಶಗಳ ಐಪಿ ಮೂಲಕ ಮೇಲ್ ಬಂದಿರುವುದು ಪತ್ತೆಯಾಗಿದ್ದು, ಸೈಬರ್ ಕ್ರೈಮ್ ಪೊಲೀಸರ ನೆರವಿನಿಂದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಬಂದಿದೆ. ಇ-ಮೇಲ್ ಆಧರಿಸಿ ಪೊಲೀಸರು ಶಾಲೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಅನಾಮಿಕ ಹೆಸರಿನಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ.