ಹೊಸದಿಲ್ಲಿ: ಬಾಲಿವುಡ್‌ನ ಹಿರಿಯ ನಟ, ನಿರ್ದೇಶಕ ಸತೀಶ್ ಕೌಶಿಕ್ ಹೃದಯಾಘಾತದಿಂದ ಬುಧವಾರ (ಮಾರ್ಚ್ 8) ರಾತ್ರಿ ನಿಧನ ಹೊಂದಿದ್ದಾರೆ.
ಅವರಿಗೆ 66 ವರ್ಷ ವಯಸ್ಸಾಗಿತ್ತು. ಸತೀಶ್ ನಿಧನ ವಾರ್ತೆಯನ್ನು ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರು ತಿಳಿಸಿ, ಟ್ವಿಟರ್ನಲ್ಲಿ ಸಂತಾಪ ಸೂಚಿಸಿದ್ದಾರೆ.
‘ನನಗೆ ಗೊತ್ತು ಸಾವು ಈ ಜಗತ್ತಿನ ಪರಮ ಸತ್ಯ. ನಾನು ಬದುಕಿರುವಾಗ ನನ್ನ ಆತ್ಮೀಯ ಗೆಳೆಯ ಸತೀಶ್ ಕೌಶಿಕ್ ಬಗ್ಗೆ ಈ ವಿಷಯ ಬರೆಯುತ್ತೇನೆ ಎಂದು ನಾನು ನನ್ನ ಕನಸಿನಲ್ಲೂ ಯೋಚಿಸಿರಲಿಲ್ಲ. 45 ವರ್ಷಗಳ ಸ್ನೇಹಕ್ಕೆ ಇದ್ದಕ್ಕಿದ್ದಂತೆ ಪೂರ್ಣ ವಿರಾಮ. ನೀನಿಲ್ಲದೆ ನನ್ನ ಜೀವನ ಎಂದಿಗೂ ಮೊದಲಿನಂತೆ ಆಗುವುದಿಲ್ಲ ಸತೀಶ್. ಓಂ ಶಾಂತಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸತೀಶ್ ಅವರು ಹಲವು ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಪೋಷಕ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. 1983ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ‘ಜಲ್ವಾ’, ‘ಸ್ವರ್ಗ್’, ‘ಆಂಟಿ ನಂಬರ್ 1’, ‘ಕಲ್ಕತ್ತಾ ಮೇಲ್’, ‘ಭಾಗಿ 3’ ಸೇರಿ ನೂರಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಕಂಗನಾ ರಣಾವತ್ ನಿರ್ದೇಶಿಸಿ, ನಟಿಸುತ್ತಿರುವ ‘ಎಮರ್ಜೆನ್ಸಿ’ ಚಿತ್ರದಲ್ಲಿ ಜಗ್ಜೀವನ್ ರಾಮ್ ಪಾತ್ರವನ್ನು ಅವರು ಮಾಡುತ್ತಿದ್ದರು. ಈ ಸಿನಿಮಾ ತೆರೆಗೆ ಬರುವುದಕ್ಕೂ ಮೊದಲೇ ಸತೀಶ್ ನಿಧನ ಹೊಂದಿದ್ದಾರೆ. ಈ ಬಗ್ಗೆ ಕಂಗನಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.