ಮುಂಬೈ: ಹಿಂದಿ ಚಿತ್ರರಂಗದ ಖ್ಯಾತ ನಟ ದಿಲೀಪ್ ಕುಮಾರ್ (98) ಬುಧವಾರ ನಿಧನರಾದರು.ದಿಲೀಪ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಮುಂಬೈನ ಪಿ.ಡಿ.ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರ ಉಸಿರಾಟ ಸಂಬಂಧಿತ ತೊಂದರೆಗಳಿಗೆ ಪಿಡಿ ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ಶ್ವಾಸಕೋಶತಜ್ಞ ಡಾ.ಜಲಿಲ್ ಪಾರ್ಕರ್ ಅವರು ನಟನ ಸಾವಿನ ಕುರಿತು ಖಚಿತ ಪಡಿಸಿರುವುದಾಗಿ ಎಎನ್‌ಐ ಟ್ವೀಟಿಸಿದೆ.
ಸಾವಿನ ಕುರಿತು ದಿಲೀಪ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ. ‘ದೇವರಿಂದಲೇ ಬಂದವರು ನಾವು ಹಾಗೂ ಅವರಲ್ಲಿಯೇ ಮರಳುವೆವು ನಾವು’ ಎಂದು ದಿಲೀಪ್ ಕುಮಾರ್ ಅವರ ಕುಟುಂಬದ ಆಪ್ತ ಫೈಸಲ್ ಫಾರೂಕಿ ಪ್ರಕಟಿಸಿದ್ದಾರೆ.
ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಜೂನ್ 30ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಕ್ಕೂ ಮುನ್ನ ಜೂನ್ 6ರಂದು ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದಲೇ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.
1922ರ ಡಿಸೆಂಬರ್ 11ರಂದು ಪೇಶಾವರದಲ್ಲಿ ಮೊಹಮ್ಮದ್ ಯೂಸುಫ್ ಖಾನ್ (ದಿಲೀಪ್ ಕುಮಾರ್), ಜನಿಸಿದರು. ನಂತರದಲ್ಲಿ ಮುಂಬೈಗೆ ಸ್ಥಳಾಂತರಗೊಂಡರು. ಅವರ ಕುಟುಂಬದ ಸದಸ್ಯರು ಹಣ್ಣುಗಳ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು.
ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ದಾದಾಸಾಹೇಬ್ ಫಾಲ್ಕೆ ಗೌರವಗಳು ಸಂದಿವೆ. ಅವರು ರಾಜ್ಯಸಭೆಯ ಸದಸ್ಯರೂ ಆಗಿದ್ದರು.