►“ಎಲ್ಲಾ ವಲಯಗಳ ವಾರ್ ರೂಮ್ ಗಳನ್ನು ತಕ್ಷಣ ರದ್ದು ಮಾಡಬೇಕು”
ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ ಸೋಂಕಿನ ಮಧ್ಯೆ ಬಿಬಿಎಂಪಿಯ ದಕ್ಷಿಣ ವಲಯದ ವಾರ್ ರೂಮ್ ನಲ್ಲಿ ನಡೆದ ಬೆಡ್ ಬ್ಲಾಕಿಂಗ್ ದಂಧೆಯ ಬಗ್ಗೆ ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಿಎಂ ಫಾರೂಕ್, ಬೆಂಗಳೂರು ದಕ್ಷಿಣ ವಲಯ ಮಾತ್ರವಲ್ಲ, ಎಲ್ಲಾ ವಲಯಗಳ ವಾರ್ ರೂಮ್ ಗಳಲ್ಲೂ ಬೆಡ್ ಬ್ಲಾಕಿಂಗ್ ಜಾಲ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ವಾರ್ ರೂಮ್ ಗಳನ್ನೂ ತಕ್ಷಣ ರದ್ದು ಮಾಡಬೇಕು. ಈ ಹಗರಣದ ಕುರಿತು ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು ದಕ್ಷಿಣ ವಲಯದ ಕೋವಿಡ್ ವಾರ್ ರೂಮ್ ನಲ್ಲಿ ಬುಧವಾರ ರಾತ್ರಿಯೂ ಬೆಡ್ ಬ್ಲಾಕಿಂಗ್ ದಂಧೆ ನಡೆದಿರುವ ಬಗ್ಗೆ ಸೂಕ್ತ ಸಾಕ್ಷ್ಯಗಳಿವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ವಾರ್ ರೂಮ್ ನ ಎಲ್ಲ ನೌಕರರನ್ನೂ ತಕ್ಷಣ ವಜಾ ಮಾಡಬೇಕು. ನ್ಯಾಯಾಂಗ ತನಿಖೆಯ ಬಳಿಕ ತಪ್ಪಿತಸ್ಥರಲ್ಲ ಎಂದು ಗೊತ್ತಾದ ಸಿಬ್ಬಂದಿಯನ್ನು ಮಹಾನಗರಪಾಲಿಕೆ ಮರುನೇಮಕ ಮಾಡಿಕೊಳ್ಳಲಿ, ಬೆಂಗಳೂರು ನಗರದ ಕೋವಿಡ್ ಆಸ್ಪತ್ರೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. 12ಕ್ಕೂ ಹೆಚ್ಚು ಆಸ್ಪತ್ರೆಗಳು ಇದರಲ್ಲಿ ಶಾಮೀಲಾಗಿವೆ ಎನ್ನಲಾಗುತ್ತಿವೆ. ಸರಕಾರ ಈ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.