ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫೋರಂನಿಂದ ಉಡುಪಿಯಲ್ಲಿ ರಕ್ತದಾನ ಶಿಬಿರ

Prasthutha|

ಉಡುಪಿ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫೋರಂ ಮಜೂರು ಮತ್ತು ಬೆಳಪು ಇವರ ವತಿಯಿಂದ ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಮಜೂರು ಪಂಚಾಯತ್ ಸಭಾಗಂಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಡಾಕ್ಟರ್ ವೀಣಾಕುಮಾರಿ ಭಾಗವಹಿಸಿ ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು.

- Advertisement -


ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಯಾಝ್ ಅಹ್ಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ಎಂಬ ಮಾತಿದೆ. ಯಾವ ವ್ಯಕ್ತಿಗೆ ರಕ್ತದ ಅವಶ್ಯ ವಿದೆಯೇ ಅವರಿಗೆ ರಕ್ತವನ್ನು ನೀಡುವುದು ಪುಣ್ಯದ ಕಾರ್ಯ. ನಾವು ಕೊಡುವ ಒಂದು ಬಾಟಲ್ ರಕ್ತ ಒಂದು ಜೀವವನ್ನು ಉಳಿಸಲು ಸಾಧ್ಯ. ಈ ಕೆಲಸ ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫೋರಂ ಮಾಡುತ್ತಿದೆ ಎಂದರು.


ರಕ್ತದಾನ ಮಾಡುವುದರಿಂದ ಕೆಲವು ಸಮಸ್ಯೆಗಳು ಬರುತ್ತವೆ ಎಂಬ ಮೂಢ ನಂಬಿಕೆ ಇಂದಿನ ಕಾಲದಲ್ಲೂ ಇದೆ. ಇದರೊಂದಿಗೆ ಗೊಂದಲ, ಆತಂಕ ಕೂಡ ಇದೆ. ಆದರೆ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆಯೇ ಹೊರತು ಆರೋಗ್ಯ ಕೆಡುವುದಿಲ್ಲ. ರಕ್ತದಾನದ ಕುರಿತಾಗಿರುವ ಜನರಲ್ಲಿರುವ ಗೊಂದಲ, ಆತಂಕ ದೂರ ಗೊಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಧನೆಗೈದ ಯಶೋದಾನಂದ ಶಾಸ್ತ್ರಿ ಮತ್ತು ಮೆಸ್ಕಾಂ ಸಿಬ್ಬಂದಿ ಗಣೇಶ್‌ರವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

- Advertisement -


ಕಾರ್ಯಕ್ರಮ ಆಗಮಿಸಿದ ರಕ್ತದಾನಿಗಳು, ತಮ್ಮ ಅಮೂಲ್ಯ ರಕ್ತವನ್ನು ಸ್ವಯಂ ಪ್ರೇರಿತರಾಗಿ ದಾನ ಮಾಡುವ ಮೂಲಕ ಮತ್ತೊಂದು ಅಮೂಲ್ಯ ಜೀವ ಉಳಿಸಲು ನೆರವಾದರು. ರಕ್ತದಾನ ಶಿಬಿರದಲ್ಲಿ ಸುಮಾರು 75 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫೋರಂ ಮಜೂರು ಇದರ ಅಧ್ಯಕ್ಷರಾದ ಶಮೀರ್ ಎಸ್.ಎಮ್.ಎಸ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಕಾಪು ಡಿವಿಜನ್ ಅಧ್ಯಕ್ಷರಾದ, ಸಾದಿಕ್ ಕೆ.ಪಿ, ಉದ್ಯಮಿ ಅರುಣ ಶೆಟ್ಟಿ, ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾದ ಕೆ.ಇ. ಇಬ್ರಾಹಿಂ, ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಅಶ್ರಫ್ ಮದನಿ, ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫೋರಂ ಬೆಳಪು ಇದರ ಅಧ್ಯಕ್ಷರಾದ ಸಿದ್ದೀಕ್ ಬದ್ರುಲ್ಲಾ, ನಿವೃತ್ತ ಶಿಕ್ಷಕ ಕಿಟ್ಟು ಮಾಸ್ಟರ್, ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫೋರಂ ಮಜೂರು ಇದರ ಕಾರ್ಯದರ್ಶಿ ಅಬ್ದುಲ್ ಹಮೀದ್, ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫೋರಂ ಬೆಳಪು ಇದರ ಕಾರ್ಯದರ್ಶಿ ಸರ್ಫಾರಾಜ್, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಾಧಿಕ್ ಕೆ.ಪಿ. ಸ್ವಾಗತಿಸಿ, ನೂರುದ್ದೀನ್ ಕರಂದಾಡಿ ನಿರೂಪಿಸಿ ವಂದಿಸಿದರು

Join Whatsapp