Home ಕರಾವಳಿ ನರಿಮೊಗರಿನಲ್ಲಿ ಬ್ಲಡ್ ಡೋನರ್ಸ್ ಫೋರಂನ ಪದಾಧಿಕಾರಿಗಳ ಪದಗ್ರಹಣ; 101 ಮಂದಿಯಿಂದ ರಕ್ತದಾನ

ನರಿಮೊಗರಿನಲ್ಲಿ ಬ್ಲಡ್ ಡೋನರ್ಸ್ ಫೋರಂನ ಪದಾಧಿಕಾರಿಗಳ ಪದಗ್ರಹಣ; 101 ಮಂದಿಯಿಂದ ರಕ್ತದಾನ

ಪುತ್ತೂರು: ಇಲ್ಲಿನ ನರಿಮೊಗರು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೆಎಂಸಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಭಾನುವಾರ ಪುರುಷರಕಟ್ಟೆ ಮದ್ರಸ ಸಭಾಂಗಣದಲ್ಲಿ ನಡೆಯಿತು. ಶಿಬಿರದಲ್ಲಿ 101 ಮಂದಿ ಭಾಗವಹಿಸಿ ರಕ್ತದಾನ ಮಾಡಿದರು.


ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಶರೀಫ್ ಕೊಡಾಜೆ ಮಾತನಾಡಿ, ಕೋವಿಡ್ ದುರಿತ ಕಾಲದಲ್ಲಿ ರಾಜ್ಯದ ಬಹುತೇಕ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಎದುರಾಗಿದ್ದು, ಇದನ್ನು ಮನಗಂಡ ಪಾಪ್ಯುಲರ್ ಫ್ರಂಟ್ ರಾಜ್ಯಾದ್ಯಂತ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಅಗತ್ಯವಿರುವ ರೋಗಿಗಳಿಗೆ ರಕ್ತ ಪೂರೈಸುವ ಮಹತ್ತರವಾದ ಕೆಲಸ ಮಾಡುತ್ತಿದೆ. ಎಲ್ಲಾ ದಾನಗಳಲ್ಲೂ ಶ್ರೇಷ್ಠವಾಗಿರುವ ರಕ್ತದಾನದಿಂದ ಒಂದು ಜೀವ ಉಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯವಂತರಾಗಿರುವ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.


ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂನ ಅಧ್ಯಕ್ಷ ಅಬ್ದುಲ್ ಸಾಲಿಂ, ಪಿಎಫ್ಐ ಡಿವಿಷನ್ ಕಾರ್ಯದರ್ಶಿ ಬಾತಿಷ ಬಡಕೋಡಿ, ಬ್ಲಡ್ ಡೋನರ್ಸ್ ಫೋರಂನ ನಿರ್ವಾಹಕ ಅಶ್ರಫ್ ಬಾವ, ನರಿಮೊಗರು ಗ್ರಾಮ ಪಂಚಾಯತ್ ಸದಸ್ಯ ಶಾಫಿ ಮುಕ್ವೆ, ಉಮ್ಮರ್ ಫಾರೂಕ್ ಅರ್ಷದಿ, ಕೆಎಂಸಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ಸಬಿಹಾ, ಪಿಎಫ್ಐ ಪುತ್ತೂರು ಅಧ್ಯಕ್ಷ ಜಾಬಿರ್ ಅರಿಯಡ್ಕ, ಆರ್ ಜೆಎಂ ಮುಕ್ವೆ ಇದರ ಅಧ್ಯಕ್ಷ ಅಬ್ದುಲ್ಲಾ ಹಾಜಿ ಮೈಸೂರು, ಎಚ್ಐಎಂ ಪುರುಷರಕಟ್ಟೆ ಇದರ ಅಧ್ಯಕ್ಷ ಇಬ್ರಾಹಿಂ ಗನ್ನಿ, ಮುಖಂಡರಾದ ಅಬೂಬಕ್ಕರ್ ಕೆ.ಮಾಯಾಂಗಳ, ಇಬ್ರಾಹೀಂ ಪಾಪೆತ್ತಡ್ಕ, ಅಶ್ರಫ್ ಮರಕೂರು, ಮುಕ್ವೆ ಝೈನುದ್ದೀನ್ ಹಾಜಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Join Whatsapp
Exit mobile version