Home ಟಾಪ್ ಸುದ್ದಿಗಳು ಕಾಡಾನೆ ಸಮಸ್ಯೆ: ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಂದ ರಸ್ತೆ ತಡೆ, ಪ್ರತಿಭಟನೆ

ಕಾಡಾನೆ ಸಮಸ್ಯೆ: ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಂದ ರಸ್ತೆ ತಡೆ, ಪ್ರತಿಭಟನೆ

ಸಕಲೇಶಪುರ: ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ತಮಟೆ ಚಳುವಳಿ  ನಡೆಸಲಾಯಿತು.

ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದ ಆವರಣದಿಂದ ಮೆರವಣಿಗೆ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಹಳೆ ಬಸ್‍ನಿ ಲ್ದಾಣದ ಸಮೀಪ ಕೆಲ ಸಮಯ ರಸ್ತೆ ತಡೆ ಮಾಡಿ ನಂತರ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾನುಬಾಳು ಭಾಸ್ಕರ್ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ, ಹಾಸನ ಜಿಲ್ಲಾ ಸಂಸದರು ಹಾಗೂ ಸ್ಥಳೀಯ ಶಾಸಕರು ಇಚ್ಛಾ ಶಕ್ತಿ ತೋರದ ಪರಿಣಾಮ ನಮ್ಮ ಭಾಗದಲ್ಲಿ ಕಾಡಾನೆಗಳ ಸಮಸ್ಯೆ ವಿಪರೀತವಾಗಿದ್ದು, ಇದಕ್ಕೆ ಹೊಣೆಯನ್ನು ನಮ್ಮ ಸಂಸದರು ಹಾಗೂ ಸ್ಥಳೀಯ ಶಾಸಕರು ಹೊರಬೇಕಾಗುತ್ತದೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.

 ಕಾಂಗ್ರೆಸ್ ಮುಖಂಡ ಡಿಸಿ ಸಣ್ಣಸ್ವಾಮಿ ಮಾತನಾಡಿ,  ಸಕಲೇಶಮರ-ಆಲೂರು ತಾಲ್ಲೂಕುಗಳಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಪ್ರತಿನಿತ್ಯ ಜನರು  ಜೀವ ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳ ಹಾವಳಿಯಿಂದಾಗಿ ಜನರು ಜೀವವನ್ನು  ಹಾಗೂ  ಬದುಕನ್ನು ಕೈಯ್ಯಲ್ಲಿ ಹಿಡಿದು ಬದುಕುವ ವಾತಾವರಣ ಸೃಷ್ಟಿಯಾಗಿದೆ. ರಾತ್ರಿ ಸಮಯದಲ್ಲಿ ಮಾತ್ರವಲ್ಲ, ಕಾಡಾನೆಗಳ ಭಯದಿಂದ ಹಗಲು ಹೊತ್ತಿನಲ್ಲಿಯೇ ಗ್ರಾಮಗಳ ರಸ್ತೆಗಳಲ್ಲಿ ನಡೆದಾಡುವುದಕ್ಕೆ, ವಾಹನಗಳಲ್ಲಿ ಓಡಾಡುವುದಕ್ಕೆ, ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳಿಸುವುದಕ್ಕೆ, ತೋಟ, ಗದ್ದೆಗಳಲ್ಲಿ ಕೆಲಸ ಮಾಡುವುದಕ್ಕೆ ಭಯವಾಗುತ್ತಿದೆ. 2003 ರಿಂದ ಸಕಲೇಶಪುರ ಹಾಗೂ ಆಲೂರು ತಾಲ್ಲೂಕುಗಳಲ್ಲಿ ಕಾಡಾನೆಗಳ ದಾಳಿಗೆ ಸಿಕ್ಕಿ 45ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 70ಕ್ಕೂ ಹೆಚ್ಚು ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ. ಕಾಫಿ ತೋಟಕ್ಕೆ ಕಾಡಾನೆ ನುಗ್ಗಿದರೆ ಕನಿಷ್ಠ 100 ಕ್ಕೂ ಹೆಚ್ಚು ಗಿಡಗಳು ಹಾನಿಯಾಗುತ್ತದೆ. ಸರ್ಕಾರ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಬದಲು ಕೇವಲ ಪರಿಹಾರ ಕೊಟ್ಟು ಸುಮ್ಮನಾಗುತ್ತಿದೆ ಎಂದು ಅವರು ಆರೋಪಿಸಿದರು.

 ಸ್ಥಳೀಯ ಶಾಸಕರು ವಿಧಾನಸೌಧದಲ್ಲಿ ಕಾಡಾನೆ ಸಮಸ್ಯೆ ವಿರುದ್ಧ ಹೋರಾಟ ಮಾಡುವ ಬದಲು ಇಲ್ಲಿ ಬಂದು ಬೀದಿಯಲ್ಲಿ ಕೂರುತ್ತಾರೆ. ಕೇವಲ ನಾಟಕ ಮಾಡುವುದರಲ್ಲೇ ಶಾಸಕರು ಕಾಲಹರಣ ಮಾಡುತ್ತಿದ್ದು, ಕಾರ್ಮಿಕರ ಜೀವದ ಜೊತೆಗೆ ಚೆಲ್ಲಾಟವಾಗುತ್ತಿದ್ದಾರೆ. ದೆಹಲಿಗೆ ನಿಯೋಗ ಕರೆದುಕೊಂಡು ಹೋಗುತ್ತೇವೆ ಎಂದು ಶಾಸಕರು ಸುಳ್ಳಾಡಿದ್ದು  ಅವರು ಯಾವಾಗ ನಿಯೋಗವನ್ನು ಕರೆದುಕೊಂಡು ಹೋಗುತ್ತಾರೆಂದು ಕಾದು ನೋಡಬೇಕಾಗಿದೆ ಎಂದರು.

 ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್, ಬ್ಲಾಕ್ ಕಾಂಗ್ರೆಸ್ ತಾಲೂಕು ಕಾರ್ಯದರ್ಶಿ ಗೊದ್ದು ಲೋಕೇಶ್, ಪಕ್ಷದ ಮುಖಂಡರಾದ ಲೋಹಿತ್ ಕೌಡಹಳ್ಳಿ, ಯಡೇಹಳ್ಳಿ ಮಂಜುನಾಥ್, ಮಸ್ತಾರೆ ಲೋಕೇಶ್,  ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುನಂದಾ ನಾಗರಾಜ್, ಕಾಂಗ್ರೆಸ್  ಪರಶಿಷ್ಠ ಜಾತಿ ವಿಭಾಗದ ತಾಲೂಕು ಅಧ್ಯಕ್ಷ ದೊಡ್ಡಿರಯ್ಯ  ಮುಂತಾದವರು ಹಾಜರಿದ್ದರು.

Join Whatsapp
Exit mobile version