ಚೆನ್ನೈ : ತಮಿಳುನಾಡಿನ ವಿರುಧ್ ನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ನಡೆದ ಸ್ಫೋಟದಲ್ಲಿ ಮಡಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. 30ಕ್ಕೂ ಅಧಿಕ ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಗರ್ಭಿಣಿ, ಕಾಲೇಜು ವಿದ್ಯಾರ್ಥಿ ಸೇರಿದಂತೆ 19 ಮಂದಿ ಮೃತಪಟ್ಟಿದ್ದಾರೆ. ವಿರುಧ್ ನಗರ ಜಿಲ್ಲೆಯ ಅಚಕುಲಂ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸ್ಫೋಟದಲ್ಲಿ 10 ಕೊಠಡಿಗಳು ನಾಶವಾಗಿದ್ದು, ಘಟನೆ ನಡೆದಾಗ ಕನಿಷ್ಠ 50 ಮಂದಿ ಕಾರ್ಮಿಕರು ಒಳಗಡೆ ಇದ್ದರು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗಣೀಶನ್ ಹೇಳಿದ್ದಾರೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ.
ರಾಸಾಯನಿಕಗಳನ್ನು ಬೆರೆಸುವಾಗ ಉಂಟಾಗುವ ಘರ್ಷಣೆಯು ಸ್ಫೋಟಕ್ಕೆ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಜಿಲ್ಲಾ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಗಣೇಶನ್ ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ.
ಫ್ಯಾಕ್ಟರಿಗೆ ಪರವಾನಗಿ ನೀಡಿದ ಶಂತನಮಾರಿ ಸೇರಿದಂತೆ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೂವರು ಆರೋಪಿಗಳಾಗಿ ಪೊಲೀಸರು ನಿನ್ನೆಯಿಂದ ಹುಡುಕಾಟ ನಡೆಸುತ್ತಿದ್ದಾರೆ.