ನವದೆಹಲಿ: ಸುಬ್ರಮಣಿಯನ್ ಸ್ವಾಮಿ ಒಬ್ಬ ಫ್ರೀಲ್ಯಾನ್ಸ್ ಪೊಲಿಟಿಶಿಯನ್ ಎಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುಬ್ರಮಣಿಯನ್ ಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ನಾನು ಅಧಿಕಾರಕ್ಕಾಗಿ ಯಾರ ಹಿಂದೆಯೂ ಬೀಳಲಿಲ್ಲ, ಯಾರ ಬೂಟು ನೆಕ್ಕುವ ಕೆಲಸ ಮಾಡಲಿಲ್ಲ, ನಾನು ಸುಮ್ಮನೆ ಆರು ಸಾರಿ ಸಂಸದನಾಗಿ ಆಯ್ಕೆಯಾಗಲಿಲ್ಲ. ಅದರಲ್ಲಿಯೂ ಮೂರು ಸಾರಿ ಲೋಕಸಭೆಯಿಂದ ಆರಿಸಿ ಬಂದಿದ್ದೇನೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದ್ದೇನೆ ಎಂದು ಹೇಳಿದ್ದಾರೆ.
ಬೆಲೆ ಏರಿಕೆ ಚರ್ಚೆ ವೇಳೆ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್ ಗಳನ್ನು ಉಲ್ಲೇಖ ಮಾಡಿದ್ದರು. ನಿಮ್ಮ ಪಕ್ಷದವರೇ ಹೀಗೆ ಹೇಳುತ್ತಿದ್ದಾರಲ್ಲ ಎಂದು ಬಿಜೆಪಿಯನ್ನು ಲೇವಡಿ ಮಾಡಿದ್ದರು, ಇದಕ್ಕೆ ಸಿಎಂ ಬೊಮ್ಮಾಯಿ ಉತ್ತರಿಸುವ ವೇಳೆ, ಸ್ವಾಮಿ ಒಬ್ಬರು ಫ್ರೀಲ್ಯಾನ್ಸ್ ಪೊಲಿಟಿಶಿಯನ್ ಆದರೆ ಆರ್ಥಿಕ ತಜ್ಞರಾಗಿ ಜೀನಿಯಸ್ ಎಂದು ಹೇಳಿದ್ದರು.
ಸುಬ್ರಮಣಿಯನ್ ಸ್ವಾಮಿ ಬಳಿಕ ಈ ಟ್ವೀಟ್ ಅನ್ನು ಅಳಿಸಿ ಹಾಕಿದ್ದಾರೆ.
ಈ ಟ್ವೀಟ್ ನ ಸ್ಕ್ರೀನ್ ಶಾಟ್ ನೊಂದಿಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, #BJPvsBJP ಕಿತ್ತಾಟ ಈಗ ದೆಹಲಿ ನಾಯಕರನ್ನೂ ಒಳಗೊಳ್ಳುತ್ತಿದೆ ತಮ್ಮನ್ನು ಟೀಕಿಸಿದವರಿಗೆ ಸುಬ್ರಮಣಿಯನ್ ಸ್ವಾಮಿ ಅವರು ‘ನಾನು ಬೂಟು ನೆಕ್ಕಿ ಅಧಿಕಾರ ಪಡೆದಿಲ್ಲ’ ಎಂದಿದ್ದಾರೆ! ಮೋದಿ ಹೊಗಳಿಕೆಯನ್ನೇ ಕಾಯಕವನ್ನಾಗಿಸಿಕೊಂಡ ರಾಜ್ಯದ ಬಿಜೆಪಿ ನಾಯಕರೇ ಮೊ-ಶಾ ಜೋಡಿಯ ಬೂಟುಗಳ ಹೊಳಪಿಗೆ ಕಾರಣ ಎಂಬುದು ಸ್ವಾಮಿಯವರ ಮಾತಿನ ಅರ್ಥ ಅಲ್ಲವೇ ? ಎಂದು ಕುಟುಕಿದೆ.