ಕೇಶವ ಕೃಪ ರಾಜ್ಯ ಸರ್ಕಾರದ ಶಕ್ತಿ ಕೇಂದ್ರವಾಗಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಟೀಕೆ

Prasthutha|

ಬೆಂಗಳೂರು: ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದ ಬದಲು ಚಾಮರಾಜಪೇಟೆಯ ಕೇಶವ ಕೃಪ ರಾಜ್ಯ ಬಿಜೆಪಿ ಸರ್ಕಾರಕ್ಕೆ ಶಕ್ತಿ ಕೇಂದ್ರವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಟೀಕಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಶವ ಕೃಪದ ಮಹತ್ವ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಬಿಬಿಎಂಪಿ ಚುನಾವಣೆ ನಡೆಸುವ ಕುರಿತು ಇತ್ತೀಚೆಗೆ ಚಾಮರಾಜಪೇಟೆಯ ಕೇಶವ ಕೃಪಾದಲ್ಲಿ ಮಹತ್ವದ ಸಭೆ ನಡೆಸಲಾಗಿದೆ ಎಂದರು.

‘ಏಪ್ರಿಲ್ ನಲ್ಲಿ ಬಿಬಿಎಂಪಿ ಚುನಾವಣೆ ನೂರಕ್ಕೆ ನೂರರಷ್ಟು ನಡೆಯಲಿದೆ. ನ್ಯಾಯಾಲಯಕ್ಕೆ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಚಾಮರಾಜಪೇಟೆಯ ಬಿಜೆಪಿ ಶಕ್ತಿ ಕೇಂದ್ರದಲ್ಲಿ ನಾಯಕರನ್ನು ಕರೆದು ಚರ್ಚಿಸಿ ಚುನಾವಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದರು.

- Advertisement -

ಬಿಜೆಪಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿನ್ನಡೆಯಾಗಿದೆ. ಡಿಲಿಮಿಟೇಶನ್ ಅನ್ನು ಬಿಬಿಎಂಪಿ ಮುಕ್ತ ಆಯುಕ್ತರು ಮಾಡಬೇಕಿತ್ತು. ಆದರೆ ಬೇರೆಯವರ ಕಚೇರಿಯಲ್ಲಿ ಮಾಡಿ ಅದನ್ನು ತಂದಿಡಲು ಪ್ರಯತ್ನಿಸುತ್ತಿದ್ದಾರೆ. ಡಿಲಿಮಿಟೇಷನ್ ಮನಸಿಗೆ ಬಂದಂತೆ ಮಾಡಿದ್ದಾರೆ. 243 ವಾರ್ಡ್ ಮಾಡಲು ಅಸೆಂಬ್ಲಿಯಲ್ಲಿ ಅನುಮೋದನೆ ನೀಡಲಾಗಿದ್ದು, ಇದನ್ನು ಅವೈಜ್ಞಾನಿಕವಾಗಿ, ಅವರಿಗೆ ಅನುಕೂಲವಾಗುವಂತೆ ಮಾಡುತ್ತಿದ್ದಾರೆ’ ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದರು.

ಕೋವಿಡ್ ಮೂರನೇ ಅಲೆ ಆರಂಭವಾಗಿ ಬಹಳ ದಿನಗಳಾಗಿವೆ. ಮೊದಲ ಅಲೆಯ ಆರಂಭದಲ್ಲಿ ಸರ್ಕಾರ ಸಂಪೂರ್ಣವಾಗಿ ಎಡವಿತ್ತು, ಎರಡನೇ ಅಲೆಯಲ್ಲಿ ಗೊತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದ್ದವು. ಮೂರನೇ ಅಲೆ ಮಾರಣಾಂತಿಕವಲ್ಲವಾದರೂ ತಜ್ಞರ ಅಭಿಪ್ರಾಯದಂತೆ ವೇಗವಾಗಿ ಹರಡಿದೆ. ಮರಣ ಪ್ರಮಾಣ ಶೇ.0.04ನಷ್ಟಿದೆ. ಕೋವಿಡ್ ಸೋಂಕು ಹೆಚ್ಚಿವೆ ಎಂದು ಹೇಳಿದರು.

ಕಳೆದ 10 ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆ ಕೇವಲ 2258 ಮಾತ್ರ. ಅದರಲ್ಲಿ ಸಾಮಾನ್ಯ ವಾರ್ಡ್ ನಲ್ಲಿ 1744, ಐಸಿಯುವಿನಲ್ಲಿ 203 ಹಾಗೂ ಐಸಿಯು ವೆಂಟಿಲೇಟರ್ ನಲ್ಲಿ 58 ಮಂದಿ ದಾಖಲಾಗಿದ್ದಾರೆ. ಸಕ್ರಿಯ ಪ್ರಕರಣಗಳ ಪೈಕಿ 2258 ಜನ ಎಂದರೆ ಇನ್ನು 3.21 ಲಕ್ಷ ಸಕ್ರಿಯ ಪ್ರಕರಣಗಳು ಆಸ್ಪತ್ರೆಯಿಂದ ಹೊರಗಿದ್ದಾರೆ. ಬೆಂಗಳೂರಿನಲ್ಲಿ 1,51,022 ಲಕ್ಷ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಕೋವಿಡ್ ಪರಿಹಾರದ ಚೆಕ್ ಬೌನ್ಸ್ ಆಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಸರ್ಕಾರದಲ್ಲಿ ಹಣ ಇದೆಯೋ ಇಲ್ಲವೋ ಗೊತ್ತಿಲ್ಲ, ಅನೇಕ ಕಡೆಗಳಲ್ಲಿ ಚೆಕ್ ಬೌನ್ಸ್ ಆಗಿರುವ ಮಾಹಿತಿ ಬಂದಿವೆ. ಅವರು ನೀಡುತ್ತಿರುವುದು ಸಾಮಾನ್ಯರಿಗೆ 50 ಸಾವಿರ ಹಾಗೂ ಬಿಪಿಎಲ್ ಕಾರ್ಡುದಾರರಿಗೆ 1 ಲಕ್ಷ. ಅನೇಕರು ತಮ್ಮ ಬಳಿ ಇದ್ದ ಚಿನ್ನ ಒಡವೆ ಮಾರಿದ್ದಾರೆ. ವಿವಿಧ ಚಿನ್ನದ ಸಾಲ ಕಂಪನಿಗಳಲ್ಲಿ ಸುಮಾರು ಟನ್ ಗಳಷ್ಟು ಚಿನ್ನ ಗಿರವಿ ಇರಿಸಲಾಗಿದೆ. ನಾನು ಚಂದಾಪುರದಲ್ಲಿ ಕೋವಿಡ್ ಸಾವಾದಾಗ ಕಾಂಗ್ರೆಸ್ ಪಕ್ಷದ ಸಾಂತ್ವಾನ ಕಾರ್ಯಕ್ರಮದ ಮೂಲಕ ಹೋದಾಗ ಆಟೋ ಓಡಿಸುತ್ತಿದ್ದ ವ್ಯಕ್ತಿ ಸತ್ತಿದ್ದ. ಮನೆಯಲ್ಲಿ ಆತನ ತಂದೆ ವಯಸ್ಸಾದವರು ಇದ್ದರು, ಇನ್ನು ಮೃತನ ಹೆಂಡತಿ ಹಾಗೂ ಮಗು ಇತ್ತು. ತಂದೆಯನ್ನು ಕೇಳಿದಾಗ ನನ್ನ ಕೈಯಲ್ಲಿ ಕೆಲಸ ಮಾಡಲು ಆಗುವುದಿಲ್ಲ, ಜೀವನ ಮಾಡುವುದು ಹೇಗೆ? ಎಂದು ಕೇಳಿದರು. ಆಗ ಸರ್ಕಾರ ಬಿಪಿಎಲ್ ಕಾರ್ಡುದಾರರಿಗೆ ಕನಿಷ್ಠ 5 ಲಕ್ಷ ಪರಿಹಾರ ನೀಡಬೇಕು ಎಂದು ಕೇಳಿಕೊಂಡೆವು. ಆದರೆ ಸರ್ಕಾರ ನ್ಯಾಯಾಲಯ ಹೇಳಿದ ನಂತರ 1 ಲಕ್ಷ ಮಾತ್ರ ನೀಡುತ್ತಿದೆ’ ಎಂದು ಉತ್ತರಿಸಿದರು.



Join Whatsapp