Home ಟಾಪ್ ಸುದ್ದಿಗಳು ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿಯ ಸೋಲು ಮುನೀರ್ ಕಾಟಿಪಳ್ಳಗೆ ಬೇಸರ ತರಿಸಿದೆ: ರಿಯಾಝ್ ಕಡಂಬು

ಬಂಟ್ವಾಳ ಪುರಸಭೆಯಲ್ಲಿ ಬಿಜೆಪಿಯ ಸೋಲು ಮುನೀರ್ ಕಾಟಿಪಳ್ಳಗೆ ಬೇಸರ ತರಿಸಿದೆ: ರಿಯಾಝ್ ಕಡಂಬು

ಮಂಗಳೂರು: ಬಂಟ್ವಾಳ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಸೋಲು ಬ್ರಿಜೇಶ್ ಚೌಟರಿಗಿಂತ ಮುನೀರ್ ಕಾಟಿಪಳ್ಳಗೆ ಹೆಚ್ಚು ಬೇಸರ ತರಿಸಿದೆ ಎಂದು ಎಸ್ ಡಿಪಿಐ ಮುಖಂಡ ರಿಯಾಝ್ ಕಡಂಬು ಕುಟುಕಿದ್ದಾರೆ.


ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್-ಎಸ್ ಡಿಪಿಐ ಮೈತ್ರಿಯನ್ನು ಪರೋಕ್ಷವಾಗಿ ಟೀಕಿಸಿದ್ದ ಎಡಪಂಥೀಯ ಮುಖಂಡ ಮುನೀರ್ ಕಾಟಿಪಳ್ಳ ವಿರುದ್ಧ ಕಿಡಿಕಾರಿರುವ ಅವರು, `ಕೋಮುವಾದ ಮತ್ತು ಫ್ಯಾಸಿಸಂ ವಿರುದ್ಧವಾಗಿದ್ದೇವೆ ಎಂದು ಪುಂಗಿ ಬಿಡುತ್ತಾರೆ, ಆದರೆ ಬಂಟ್ವಾಳದಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಮತ್ತು SDPI ಅಧಿಕಾರದ ಭಾಗವಾದರೆ ಇವರು ಸಹಿಸುವುದಿಲ್ಲ. ಇವರ ಪಕ್ಷ ತ್ರಿಶೂರ್ ನಲ್ಲಿ ಇದನ್ನೇ ಮಾಡಿದ್ದು, ಬಿಜೆಪಿಯ ಸುರೇಶ್ ಗೋಪಿ ಅವರನ್ನು ಹಿಂಬಾಗಿಲಿನಿಂದ ಗೆಲ್ಲಿಸಿ ಕಾಂಗ್ರೆಸ್ ಗೆಲ್ಲದಂತೆ ನೋಡಿಕೊಂಡಿದ್ದಾರೆ. ಕಾಂಗ್ರೆಸ್’ನ ಶಾಫಿ ಪರಂಬಿಲ್ ಅವರನ್ನು ಸೋಲಿಸಲು CPM ಮತ್ತು ಬಿಜೆಪಿ ರಾತ್ರಿ ಪಾಳಿಯಲ್ಲಿ ಮೈತ್ರಿ ಮಾಡಿಕೊಂಡು ಕೆಲಸ ಮಾಡಿದೆ. ಇದೀಗ ಬಂಟ್ವಾಳ ಪುರಸಭೆ ಚುನಾವಣೆಯಲ್ಲಿ SDPI ಕಾಂಗ್ರೆಸ್ ಒಟ್ಟಾಗಿರುವುದು ಸಹಿಸುತ್ತಿಲ್ಲ. ಬಂಟ್ವಾಳದಲ್ಲಿ ಕಾಂಗ್ರೆಸ್ SDPI ಹೊಂದಾಣಿಕೆ ಮಾಡದೇ ಬಿಜೆಪಿ ಅಧಿಕಾರಕ್ಕೆ ಬರಬೇಕಿತ್ತೇ? ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವ ಚಿಂತನೆಗೆ ಅದು ಪೂರಕವಾಗಿದೆಯೇ?’ ಎಂದು ರಿಯಾಝ್ ಕಡಂಬು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್-ಎಸ್ ಡಿಪಿಐ ಮೈತ್ರಿಯನ್ನು ಪರೋಕ್ಷವಾಗಿ ಟೀಕಿಸಿದ್ದ ಮುನೀರ್ ಕಾಟಿಪಳ್ಳ, `ಒಂದು ಕೋಮುವಾದವನ್ನು ಹಿಮ್ಮೆಟ್ಟಿಸಲು ಮತ್ತೊಂದು ಕೋಮುವಾದದೊಂದಿಗೆ ಕೈ ಜೋಡಿಸುವುದು ರಾಜಕೀಯವಾಗಿ ಆತ್ಮಹತ್ಯಾತ್ಮಕ ನಡೆ. ಜಾತ್ಯಾತೀತ ನಿಲುವಿಗೆ ಬದ್ದರಾಗಲು ಸಣ್ಣ ಪುಟ್ಟ ಅಧಿಕಾರ ಸ್ಥಾನವನ್ನು ಕಳೆದು ಕೊಳ್ಳಲೂ ಸಿದ್ದರಿಲ್ಲ ಎಂಬುದು ಖೇದಕರ. ಕೋಮುವಾದದ ಪ್ರಯೋಗ ಶಾಲೆಯಾಗಿರುವ ಕರಾವಳಿ ಜಿಲ್ಲೆಯಲ್ಲಿ ಇದು ಉಂಟು ಮಾಡುವ ಹಾನಿ ಬಹಳ ದೊಡ್ಡದು’ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

Join Whatsapp
Exit mobile version