Home ರಾಜ್ಯ ಈದ್ಗಾ ಮೈದಾನದಲ್ಲೇ ಗಣಪತಿ ಕೂರಿಸಬೇಕು ಎನ್ನುವ ಹಠದ ಹಿಂದೆ ಬಿಜೆಪಿಯ ಕೋಮು ದ್ವೇಷ ಅಡಗಿದೆ: ಅಬ್ದುಲ್...

ಈದ್ಗಾ ಮೈದಾನದಲ್ಲೇ ಗಣಪತಿ ಕೂರಿಸಬೇಕು ಎನ್ನುವ ಹಠದ ಹಿಂದೆ ಬಿಜೆಪಿಯ ಕೋಮು ದ್ವೇಷ ಅಡಗಿದೆ: ಅಬ್ದುಲ್ ಮಜೀದ್

ಬೆಂಗಳೂರು: ಗಣಪತಿ ಕೂರಿಸುವುದು ಸರ್ಕಾರದ ಕೆಲಸವಲ್ಲ. ಈದ್ಗಾ ಮೈದಾನದಲ್ಲೇ ಗಣಪತಿ ಕೂರಿಸಬೇಕು ಎನ್ನುವ ಹಠದ ಹಿಂದೆ ಬಿಜೆಪಿಯ ಕೋಮು ದ್ವೇಷ ಅಡಗಿದೆ ಎಂದು ಎಸ್‍ ಡಿಪಿಐನ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು   ಆರೋಪಿಸಿದ್ದಾರೆ.

ಚಾಮರಾಜಪೇಟೆಯ ಈದ್ಗಾ ಮೈದಾನ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ ಅವರು ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಸುಮಾರು 120 ವರ್ಷಗಳ ಇತಿಹಾಸ ಇದೆ. 1898ರಲ್ಲೇ ಅದು ಮುಸ್ಲಿಮರ ಈದ್ ಪ್ರಾರ್ಥನೆಗೆ ಮೀಸಲಾಗಿರುವ ಸ್ಥಳ ಎಂದು ಬ್ರಿಟಿಷರ ದಾಖಲೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ ಎಂದು ಅವರು ಹೇಳಿದರು. 1938 ರಿಂದಲೂ ಅಲ್ಲಿ ಈದ್ ನಮಾಝ್ ನಿರ್ವಹಿಸಲಾಗುತ್ತಿದೆ ಅನ್ನುವುದಕ್ಕೆ ಸಾಕ್ಷ್ಯಗಳು ಲಭ್ಯ ಇವೆ. ಅದನ್ನು ಕರ್ನಾಟಕದ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ಇಲ್ಲ ಸಲ್ಲದ ವಿವಾದವನ್ನು ಸೃಷ್ಟಿ ಮಾಡಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದೆ ಎಂದು ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಕೂಡ ಅದು ಈದ್ಗಾ ಮೈದಾನ ಎಂದೇ ಗುರುತಿಸಲಾಗಿತ್ತು ಮತ್ತು ಮುಸ್ಲಿಮರ ಒಡತನದಲ್ಲಿಯೇ ಇತ್ತು. ಮುಂದೆ 1991ರ ಸರ್ಕಾರದ ಪೂಜಾ ಸ್ಥಳಗಳ ಕಾಯ್ದೆಯಲ್ಲಿ ಹೇಳಿರುವುದೇನೆಂದರೆ, ಯಾವುದೇ ಧಾರ್ಮಿಕ ಸ್ಥಳಗಳು 1947 ಆಗಸ್ಟ್ 15ಕ್ಕೆ ದಾಖಲಾಗಿರುವಂತೆ ಯಾವ ಧಾರ್ಮಿಕ ಸ್ವರೂಪದಲ್ಲಿ ಇದ್ದವೋ ಅವುಗಳು ಅದೇ ಸ್ವರೂಪದಲ್ಲಿ ಇರಬೇಕು ಎಂದಿದೆ.  1991ರ ಈ ಕಾಯ್ದೆಯ ಪ್ರಕಾರ ನೋಡಿದರೆ ಸರ್ಕಾರ ಮತ್ತು ಬಿಬಿಎಂಪಿಗೆ ಆ ಸ್ಥಳದ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಎಂದರು.

1955 ರವರೆಗೆ ಆ ಸ್ಥಳದ ವಿಚಾರವಾಗಿ ಯಾರೂ ಕೂಡ ಒಡೆತನದ ದಾವೆಯನ್ನು ಹೂಡಿರಲಿಲ್ಲ. ಅದು ಆರಂಭವಾಗಿದ್ದು 1955 ರಲ್ಲಿ. ಅಂದಿನ ಬೆಂಗಳೂರು ಸಿಟಿ ಮುನ್ಸಿಪಾಲಿಟಿ ಕಾರ್ಪೊರೇಷನ್ ಆ ಸ್ಥಳದಲ್ಲಿ ಶಾಲೆ ನಿರ್ಮಿಸಲು ಮುಂದಾಗಿತ್ತು. ಈ ಯೋಜನೆಗೆ ಅಂದಿನ ಈದ್ಗಾ ಮೈದಾನದ ಉಸ್ತುವಾರಿ ವ್ಯವಸ್ಥಾಪಕರು ವಿರೋಧ ವ್ಯಕ್ತಪಡಿಸಿದರು. ಶಾಲೆ ನಿರ್ಮಿಸಲು ಸಾಕಷ್ಟು ಬೇರೆ ಜಾಗ ಇರುವಾಗ ಈದ್ಗಾ ಮೈದಾನದಲ್ಲೇ ಏಕೆ ಶಾಲೆ ನಿರ್ಮಾಣ ಆಗಬೇಕು? ಎಂದು ಅವರು ಪ್ರಶ್ನೆ ಮಾಡುತ್ತಾರೆ. ಆ ಯೋಜನೆಯನ್ನು ತಡೆಯುವಂತೆ ಅಂದಿನ ಬೆಂಗಳೂರು ಮುನ್ಸೀಫ್ ಕೋರ್ಟ್ ನಲ್ಲಿ 1956 ರಲ್ಲಿ ಅವರು ಕೇಸು ದಾಖಲಿಸುತ್ತಾರೆ. ಆದರೆ ಆ ಅರ್ಜಿಯನ್ನು ಮುನ್ಸೀಫ್ ಕೋರ್ಟ್ ವಜಾ ಮಾಡುತ್ತದೆ. ಆದರೆ ಅದೇ ವರ್ಷ ಈದ್ಗಾ ಮೈದಾನದ ಉಸ್ತುವಾರಿ ಖಾಜಿ ಅವರು ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಬೆಂಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ಮೊದಲನೇ ಮೇಲ್ಮನವಿ ಹೂಡುತ್ತಾರೆ. ಇದರ ವಿಚಾರಣೆ ನಡೆಸಿದ ಬೆಂಗಳೂರಿನ ಪ್ರಿನ್ಸಿಪಾಲ್ ಸಿವಿಲ್ ಕೋರ್ಟ್, ಈದ್ಗಾ ಮೈದಾನ ಇರುವ ಎರಡು ಎಕರೆ ಐದು ಗುಂಟೆ ಜಾಗವನ್ನು ಈದ್ಗಾ ಮೈದಾನ; ಅಂದರೆ ಈದ್ ದಿನ ಮುಸ್ಲಿಮರು ನಮಾಝ್ ನಿರ್ವಹಿಸಲು ಇರುವ ಸ್ಥಳ ಎಂದು ಗುರುತಿಸಿ, ಅದು ಮುಸ್ಲಿಮರಿಗೆ ಸೇರಿದ್ದು ಎಂದು ತೀರ್ಪು ನೀಡುತ್ತದೆ. ಜೊತೆಗೆ ಇದರಲ್ಲಿ ಸರ್ಕಾರದ ಮತ್ತು ಸಿಟಿ ಮುನಿಸಿಪಾಲ್ ಕಾರ್ಪೊರೇಷನ್ ಹಸ್ತಕ್ಷೇಪ ಮಾಡುವ ಹಾಗಿಲ್ಲ ಎಂದು ನಿರಂತರ ತಡೆಯಾಜ್ಞೆಯನ್ನು ನೀಡುತ್ತದೆ.

1958 ರಲ್ಲಿ ಸಿವಿಲ್ ನ್ಯಾಯಾಲಯದ ತೀರ್ಪಿನ ವಿರುದ್ಧ ಸಿಟಿ ಮುನಿಸಿಪಾಲ್ ಕಾರ್ಪೊರೇಷನ್ ಆಗಿನ  ಮೈಸೂರು ಹೈಕೋರ್ಟ್ ಗೆ ಮೊರೆ ಹೋಗುತ್ತದೆ. ಆಗ ಅಧಿಕಾರದಲ್ಲಿ ಇದ್ದದ್ದು ಕಾಂಗ್ರೆಸ್ ಸರ್ಕಾರ. ಆದರೆ ಮೈಸೂರು ಹೈಕೋರ್ಟ್ ತೀರ್ಪು ಕೂಡ ಮುಸ್ಲಿಮರ ಪರವಾಗಿ ಬರುತ್ತದೆ ಇದರ ವಿರುದ್ಧ ಸರ್ಕಾರ ಮತ್ತೆ 1962 ರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತದೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದಿ. 27-01-1964 ರಲ್ಲಿ ತನ್ನ ತೀರ್ಪನ್ನು ನೀಡುತ್ತದೆ ತೀರ್ಪಿನಲ್ಲಿ; ಅನಾದಿಕಾಲದಿಂದಲೂ ಈದ್ಗಾ ಮೈದಾನ ಮುಸ್ಲಿಮರ ಆಸ್ತಿ ಆಗಿರುತ್ತದೆ, ಆರಂಭದಿಂದ ಅದರ ಬಳಕೆ ಒಂದೇ ಕಾರಣಕ್ಕೆ, ಅಂದರೆ ಈದ್ ನಮಾಝ್ ಗಾಗಿ ಆಗಿರುತ್ತದೆ ಎಂದು ಹೇಳುತ್ತಾ ಸರ್ಕಾರದ ಅರ್ಜಿಯನ್ನು ವಜಾ ಮಾಡುತ್ತದೆ. ಜೊತೆಗೆ, ಸಿಟಿ ಮುನಿಸಿಪಲ್ ಕಾರ್ಪೊರೇಷನ್ ಈ ಮೈದಾನದ ಮಾಲೀಕತ್ವ, ಬಳಕೆಯ ಬಗ್ಗೆ ಯಾವುದೇ ರೀತಿಯಾದಂತಹ ತನ್ನ ಪರವಾದ ದಾಖಲೆಗಳನ್ನು ನೀಡಿಲ್ಲ ಎನ್ನುವ ಅಂಶವನ್ನು ಕೂಡ ಸುಪ್ರೀಂ ಕೋರ್ಟ್ ಹೇಳುತ್ತದೆ. ಎಂದು ಅಬ್ದುಲ್ ಮಜೀದ್ ಮೈಸೂರು ಅವರು ವಿವರಿಸಿದರು.

ಅದರ ಜೊತೆಗೆ ಈದ್ಗಾ ಮೈದಾನ ವಕ್ಫ್ ಬೋರ್ಡ್ ಆಸ್ತಿ ಎನ್ನಲು ಇರುವ ದಾಖಲೆಗಳ ಬಗ್ಗೆ ವಿವರಣೆಯನ್ನು ಕೊಟ್ಟರು. 07-06-1965 ರಲ್ಲಿ ಅಂದಿನ ಮೈಸೂರು ಸ್ಟೇಟ್ ಬೋರ್ಡ್ ಆಫ್ ವಕ್ಫ್ ದಾಖಲೆಗಳಲ್ಲಿ ಈದ್ಗಾ ಮೈದಾನ ವಕ್ಫ್ ಬೋರ್ಡ್ ಗೆ ಸೇರಿದ್ದು ಅನ್ನುವುದರ ಬಗ್ಗೆ ಸ್ಪಷ್ಟ ಉಲ್ಲೇಖ ಇದೆ; ಅದು ಗೆಜೆಟ್ ನಲ್ಲಿ ಕ್ರ. ಸಂ.137 ರಲ್ಲಿ ಕೂಡ ಪ್ರಕಟವಾಗಿದೆ ಎಂದರು. 1979 ಮತ್ತು 81 ರ ಕಟ್ಟಡಗಳ ಪರವಾನಿಗೆಗೆ ಸಂಭಂಧಿಸಿದ ದಾಖಲೆಗಳ ಪ್ರಕಾರವೂ ಕೂಡ ಅದು ವಕ್ಫ್ ಬೋರ್ಡ್ ಆಸ್ತಿಯಾಗಿಯೇ ಪರಿಗಣಿಸಲಾಗಿದೆ ಎಂದು ಹೇಳಿದರು. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ಕಂದಾಯ ಇಲಾಖೆ ಸಚಿವರು ಈ ಎಲ್ಲ ವಿಚಾರಗಳನ್ನು ರಾಜ್ಯದ ಜನರಿಂದ ಬಚ್ಚಿಟ್ಟು ದಾರಿ ತಪ್ಪಿಸುವ ಕೆಲಸ ಮಾಡಿದರು ಎಂದು ಆರೋಪಿಸಿದರು. ಅದಲ್ಲದೆ ಈದ್ಗಾ ಮೈದಾನಕ್ಕೆ ಸರ್ಕಾರ ಈ ಹಿಂದೆಯೇ ಪರ್ಯಾಯ ಜಾಗ ಕಲ್ಪಿಸಿದೆ ಎಂದಿರುವ ಕಂದಾಯ ಸಚಿವ ಅಶೋಕ್ ಅವರ ಹೇಳಿಕೆಗೆ, ಅದರ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉತ್ತರ ಇದೆ; ಪರ್ಯಾಯ ಸ್ಥಳ ನೀಡಿರುವುದು ಮುಸ್ಲಿಮರ ಸ್ಮಶಾನಕ್ಕೆ ಹೊರತು ಪ್ರಾರ್ಥನೆಯ ವಿಚಾರಕ್ಕಾಗಿ ಅಲ್ಲ. ಈ ಹಿಂದೆ ಇದ್ದ ಸ್ಮಶಾನದ ಸ್ಥಳಕ್ಕೆ ಪರ್ಯಾಯವಾಗಿ ಜಮೀನು ನೀಡಲಾಗಿದೆ. ಈದ್ಗಾ ಮೈದಾನದ ವಿಚಾರವಾಗಿ ಯಾವುದೇ ಬದಲಾವಣೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ ಎಂದು ಹೇಳಿದರು.

ಈ ವಿಚಾರವಾಗಿ ಮೊನ್ನೆ ಹೈಕೋರ್ಟ್ ಯಥಾಸ್ಥಿತಿ ಕಾಪಾಡಿ ಎಂದು ಮಧ್ಯಂತರ ಆದೇಶ ನೀಡಿತು. ಆದರೂ ಕೂಡ ಮತ್ತೆ ರಾಜ್ಯ ಸರ್ಕಾರ ದ್ವಿ ಸದಸ್ಯ (ವಿಭಾಗೀಯ) ಪೀಠಕ್ಕೆ ಮರು ಪರಿಶೀಲನೆ ಅರ್ಜಿ ಸಲ್ಲಿಸಿದ್ದು ಏಕೆ? ಗಣಪತಿ ಕೂರಿಸುವ ಕೆಲಸ ಸರ್ಕಾರಕ್ಕೆ ಏಕೆ? ಎಂದು ಅವರು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಅತಿವೃಷ್ಟಿಯಿಂದ ಜನ ಬೀದಿಗೆ ಬಿದ್ದಿದ್ದಾರೆ. ನಿರುದ್ಯೋಗದಿಂದ ತತ್ತರಿಸಿ ಹೋಗಿದ್ದಾರೆ. ಕೋವಿಡ್ ಕಾರಣದಿಂದಾಗಿ ಜನ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇವುಗಳ ಬಗ್ಗೆ ಗಮನ ಹರಿಸದ ಸರ್ಕಾರ, ಕೋಮು ಭಾವನೆಗಳನ್ನು ಕೆರಳಿಸಿ ರಾಜ್ಯದಲ್ಲಿ ಅಶಾಂತಿ ಉಂಟುಮಾಡಲು ಹೊರಟಿದೆ ಎಂದರು.

ಬಿಜೆಪಿ ಸರ್ಕಾರದ ಈ ನಡವಳಿಕೆಯ ಹಿಂದೆ ಕೇವಲ ರಾಜಕೀಯ ಉದ್ದೇಶ ಇದೆ. ರಾಜ್ಯದಲ್ಲಿ ಜನರು ಭ್ರಷ್ಟ, ಕೋಮುವಾದಿ ಬಿಜೆಪಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜೊತೆಗೆ ಬಿಜೆಪಿಯೇ ಕೈಗೊಂಡ ಇತ್ತೀಚಿನ ಎರಡು ಸರ್ವೆಗಳಲ್ಲಿ ಮುಂದಿನ ಚುನಾವಣೆಯಲ್ಲಿ ಅವರ ಸೋಲು ಖಚಿತವಾಗಿದೆ. ಲಂಚದ ವಿಚಾರವಾಗಿ 40% ಇದ್ದ ಲಂಚದ ಪ್ರಮಾಣ  50% ಗೆ ಏರಿಕೆಯಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ ಮತ್ತು 13000 ಖಾಸಗಿ ಶಾಲೆಗಳ ಒಕ್ಕೂಟ ರಾಜ್ಯ ಸರ್ಕಾರದ ಭ್ರಷ್ಟಾಚಾರದಿಂದ ತಾವು ಬೇಸತ್ತಿದ್ದೇವೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಈ ಎಲ್ಲದರಿಂದ ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡುವಂತಹ ಕುತಂತ್ರದ ಯೋಜನೆಯನ್ನು ರೂಪಿಸಿಕೊಂಡಿದೆ.

ಗಣೇಶನನ್ನು ಕೂರಿಸಲು ಬೇಕಾದಷ್ಟು ಜಾಗಗಳಿವೆ. ಅದರ ಬಗ್ಗೆ ನಾವು ಎಂದು ಆಕ್ಷೇಪ ಮಾಡಿಲ್ಲ. ಆದರೆ ಮುಸ್ಲಿಮರ ಸ್ಮಶಾನದ ಜಾಗದಲ್ಲಿ, ಅವರು ನಮಾಜ್ ನಿರ್ವಹಿಸುವ ಸ್ಥಳದಲ್ಲಿ ಗಣೇಶನನ್ನು ಕೂರಿಸುವುದು ಎಷ್ಟು ಸೂಕ್ತ ಎಂದು ಹಿಂದೂ ಬಾಂಧವರು ಯೋಚಿಸಬೇಕು ಎಂದು ಅವರು ಹೇಳಿದರು. ಸರ್ಕಾರ ಜಿದ್ದಿಗೆ ಬಿದ್ದು ಸೌಹಾರ್ದಯುತ ವಾತಾವರಣವನ್ನು ಕೆಡಿಸುತ್ತಿದೆ. ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಅಲ್ಲಿ ಯಾವುದೇ ರೀತಿಯಾದ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು.  ಈ ವಿಚಾರವಾಗಿ ಸಮಾಜದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾದರೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಹಾಗಾಗಿ ಅತ್ಯಂತ ಸೂಕ್ಷ್ಮವಾದ ಈ ವಿಚಾರದಲ್ಲಿ ಸರ್ಕಾರ ನ್ಯಾಯಯುತವಾದ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಈ ವಿಚಾರದಲ್ಲಿ ಮೊದಲ ಆರೋಪಿ ಕಾಂಗ್ರೆಸ್ ಪಕ್ಷ. ಅದು ಮುಸ್ಲಿಮರಿಗೆ ದ್ರೋಹ ಬಗೆದು ಈದ್ಗಾ ಮೈದಾನವನ್ನು ಕಸಿಯುವ ಉದ್ದೇಶದಿಂದ ಕೋರ್ಟ್ ಮೊರೆ ಹೋಯಿತು. ಅದಾದ ನಂತರ ಅದು ಸಾಕಷ್ಟು ಬಾರಿ ಅಧಿಕಾರಕ್ಕೆ ಬಂದರೂ ಸಹ ಈ ವಿವಾದಕ್ಕೆ ಶಾಶ್ವತ ಪರಿಹಾರ ಹುಡುಕುವ ಇಚ್ಛಾಶಕ್ತಿ ತೋರಲಿಲ್ಲ. ಈ ವಿಚಾರದಲ್ಲಿ ಬಿಜೆಪಿಯಷ್ಟೇ ವಂಚನೆ ಕಾಗ್ರೆಸ್ ಪಕ್ಷ ಕೂಡ ಮಾಡಿದೆ ಎಂದು ಅವರು ಆರೋಪಿಸಿದರು.

ಮೋದಿಯವರು ಸಬ್ ಕಾ ಸಾತ್... ಅಂತಾರೆ, ಅದರಲ್ಲಿ ಮುಸ್ಲಿಮರು ಬರುತ್ತಾರ? ಹಾಗಿದ್ದರೆ ರಾಜ್ಯದ ಒಂದು ಕೋಟಿ ಮುಸ್ಲಿಮರ ಭಾವನೆಗಳಿಗೆ ಬೆಲೆ ಕೊಟ್ಟು ಈದ್ಗಾ ಮೈದಾನವನ್ನು ಮುಸ್ಲಿಮರಿಗೆ ಬಿಟ್ಟು ಕೊಡುವ ಮನಸ್ಸು ಮಾಡಲಿ ಎಂದು ಸರ್ಕಾರವನ್ನು ಅಬ್ದುಲ್ ಮಜೀದ್ ಮೈಸೂರು ವಿನಂತಿಸಿಕೊಂಡರು.

Join Whatsapp
Exit mobile version