Home ಟಾಪ್ ಸುದ್ದಿಗಳು ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ: ಸಂಗಮೇಶ್ ನಿರಾಣಿಗೆ ಟಿಕೆಟ್ ನೀಡಲು...

ತೇರದಾಳ ಶಾಸಕ ಸಿದ್ದು ಸವದಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ: ಸಂಗಮೇಶ್ ನಿರಾಣಿಗೆ ಟಿಕೆಟ್ ನೀಡಲು ಆಗ್ರಹ

ತೇರದಾಳ (ಬಾಗಲಕೋಟೆ ಜಿಲ್ಲೆ): ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಅವರಿಗೆ ಮತ್ತೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಪಕ್ಷದ ಕಾರ್ಯಕರ್ತರೇ ಹೋರಾಟಕ್ಕೆ ಇಳಿದಿದ್ದಾರೆ.


ಸಿದ್ದು ಸವದಿ ಕ್ಷೇತ್ರದ ಅಭಿವೃದ್ಧಿಗೆ ಏನೂ ಮಾಡಿಲ್ಲ. ಜನರು ಅವರನ್ನು ತಿರಸ್ಕರಿಸಲು ತೀರ್ಮಾನಿಸಿದ್ದಾರೆ. ಹೀಗಾಗಿ ಮತ್ತೆ ಅಭ್ಯರ್ಥಿಯಾಗಿ ಅವರನ್ನು ಕಣಕ್ಕಿಳಿಸಿದರೆ, ತೇರದಾಳ ಕೈತಪ್ಪುತ್ತದೆ. ಇದನ್ನೇ ನಾವು ರಾಜ್ಯ ನಾಯಕತ್ವಕ್ಕೆ ತಿಳಿಸಿದ್ದೇವೆ ಎಂದು ತೇರದಾಳದ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಪರಪ್ಪ ಪಾಟೀಲ್ ಹೇಳಿದ್ದಾರೆ.
ದೊಡ್ಡಬಳ್ಳಾಪುರ ರಸ್ತೆಯಲ್ಲಿನ ರೆಸಾರ್ಟ್ ನಲ್ಲಿ ಬಿಜೆಪಿ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ತೇರದಾಳದ ನೂರಾರು ಬಿಜೆಪಿ ಕಾರ್ಯಕರ್ತರು ಆಗಮಿಸಿ, ರೆಸಾರ್ಟ್ ಗೆ ಮುತ್ತಿಗೆ ಹಾಕಿದ್ದರು. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೂ ತೆರಳಿ ಸಿದ್ದು ಸವದಿ ಅವರಿಗೆ ಟಿಕೆಟ್ ನೀಡದಂತೆ ನಾಯಕರಿಗೆ ಮನವಿ ಮಾಡಿದ್ದರು.


ಮತ್ತೊಬ್ಬ ಕಾರ್ಯಕರ್ತ ಚನ್ನಮಲ್ಲಿಕಾರ್ಜುನ ಸಂಗನಹಟ್ಟಿ ಮಾತನಾಡಿ, ಸಿದ್ದು ಸವದಿ ಕ್ಷೇತ್ರವನ್ನು ಮತ್ತು ಪಕ್ಷದ ಕಾರ್ಯಕರ್ತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಕಾರಣಕ್ಕೆ ಜನ ಕಳೆದ ಬಾರಿ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿದ್ದರು. ಈ ಬಾರಿ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರೆ, ಬಿಜೆಪಿ ಸೋಲುವುದು ಖಚಿತ’ ಎಂದು ತಿಳಿಸಿದರು.
ಪರ್ಯಾಯ ಅಭ್ಯರ್ಥಿ ಯಾರಾಗಬಹುದು ಎಂದು ಕೇಳಿದಾಗ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಕಿರಿಯ ಸಹೋದರ ಸಂಗಮೇಶ್ ನಿರಾಣಿ ಅವರಿಗೆ ಟಿಕೆಟ್ ಕೊಡಬೇಕು ಎಂದು ನೂರಾರು ಕಾರ್ಯಕರ್ತರು ಘೋಷಣೆ ಕೂಗಿದರು.


“ಸಂಗಮೇಶ್ ಯುವ ಉತ್ಸಾಹಿ, ಜೊತೆಗೆ ಅವರು ನೀರಾವರಿ ವಿಷಯಗಳಲ್ಲಿ ಪರಿಣತರಾಗಿದ್ದಾರೆ. ಆಡಳಿತದ ಅನುಭವವೂ ಅವರಿಗೆ. ಜನರೊಂದಿಗೆ ಬೆರೆಯುತ್ತಾರೆ. ಅವರ ಕಷ್ಟಕ್ಕೆ ಸ್ಪಂದಿಸುತ್ತಾರೆ. ಹೀಗಾಗಿ ಸಂಗಮೇಶ್ ನಿರಾಣಿ ಅವರೇ ತೇರದಾಳಕ್ಕೆ ಸೂಕ್ತ ಅಭ್ಯರ್ಥಿ ಎಂದು ಮಲ್ಲಿಕಾರ್ಜುನ ಪಾಟೀಲ್ ಅಭಿಪ್ರಾಯಪಟ್ಟರು.


ಒಂದೇ ಕುಟುಂಬದಲ್ಲಿ ಇಬ್ಬರಿಗೆ, ಮೂವರಿಗೆ ಅವಕಾಶವನ್ನು ಬಿಜೆಪಿ ನೀಡುವುದಿಲ್ಲವಲ್ಲ ಎಂದು ಕೇಳಿದಾಗ, ಚನ್ನಮಲ್ಲಿಕಾರ್ಜುನ ಸಂಗನಹಟ್ಟಿ ಮಾತನಾಡಿ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಒಂದೊಂದು ಕ್ಷೇತ್ರವೂ ಅತಿ ಮುಖ್ಯ. ಸಿದ್ದು ಸವದಿ ಅವರಿಗೆ ಟಿಕೆಟ್ ಕೊಟ್ಟರೆ ಸೋಲು ಖಚಿತ. ಹೀಗಾಗಿ ಸಂಗಮೇಶ್ ನಿರಾಣಿ ಅವರಿಗೆ ಟಿಕೆಟ್ ಕೊಟ್ಟರೆ ಈ ಕ್ಷೇತ್ರ ಬಿಜೆಪಿಯಲ್ಲೇ ಉಳಿಯುತ್ತದೆ. ಜನರೂ ಅವರನ್ನು ಶಾಸಕರಾಗಿ ನೋಡಲು ಬಯಸುತ್ತಾರೆ ಎಂದರು.
ಪಕ್ಷದ ವರಿಷ್ಠರು ಕಾರ್ಯಕರ್ತರ ಮನವಿಗೆ ಸ್ಪಂದಿಸಿ, ಸಂಗಮೇಶ್ ನಿರಾಣಿ ಅವರಿಗೇ ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸವನ್ನು ಕಾರ್ಯಕರ್ತರು ವ್ಯಕ್ತಪಡಿಸಿದರು.
ತೇರದಾಳ ಬಿಜೆಪಿ ಕಾರ್ಯಕರ್ತರಾದ ತಾವೆಲ್ಲ ಕ್ಷೇತ್ರ ಉಳಿಸಿಕೊಳ್ಳಲು ಬೆಂಗಳೂರಿಗೆ ಬಂದಿರುವುದಾಗಿ ಸ್ಪಷ್ಟಪಡಿಸಿದರು.

Join Whatsapp
Exit mobile version