ಬೆಂಗಳೂರು: ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯ ನಡೆಯ ವಿರುದ್ದ ಕೆಂಡಕಾರಿರುವ ರಾಜ್ಯ ಕಾಂಗ್ರೆಸ್, ಬಿಜೆಪಿಗೆ ಕಾರ್ಯಕರ್ತರೆಂದರೆ ಬಳಸಿ ಬಿಸಾಡುವ ಟೂಲ್‌ಕಿಟ್ ಅಷ್ಟೇ ಎಂದಿದೆ. ಬಿಜೆಪಿಯವರು ಲಾಭವಿದ್ದರೆ ಅನಾಥ ಶವಕ್ಕೂ ಕೇಸರಿ ಶಾಲು ಹಾಕಿ ನಮ್ಮವನೆಂದು ಮೆರವಣಿಗೆ ಮಾಡುತ್ತಾರೆ, ನಷ್ಟವಾಗುವುದಿದ್ದರೆ ಕೇಸರಿ ಶಾಲು ಹೊದ್ದು ಸತ್ತರೂ ನಮ್ಮವನಲ್ಲ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದೆ.
ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಉದಯ್ ಗಾಣಿಗಾ, ವಿನಾಯಕ ಬಾಳಿಗಾ ಸೇರಿದಂತೆ ಬಿಜೆಪಿಯ ಬಳಸಿ ಬೀಸಾಡುವ ಧೋರಣೆಗೆ ಹಲವು ಉದಾಹರಣೆಗಳಿವೆ ಎಂದಿದೆ.
ಮತ್ತೊಂದು ಟ್ವೀಟ್ ಮಾಡಿ, ಒಬ್ಬ ಹಿಂದೂ ಕಾರ್ಯಕರ್ತ, ಅಲ್ಲದೆ ಸ್ವತಃ ಬಿಜೆಪಿಯ ಕಾರ್ಯಕರ್ತನ ಸಾವಿಗೆ ನ್ಯಾಯ ಕೊಡಿಸುವ ಬದಲಾಗಿ ಯಕಶ್ಚಿತ ಒಬ್ಬ ಭ್ರಷ್ಟ ಸಚಿವನಿಗೊಸ್ಕರ ಸಾವನ್ನೇ ಅವಮಾನಿಸುತ್ತಿದೆ ಬಿಜೆಪಿ. ಬಿಜೆಪಿಯ ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಂಡು ಎಚ್ಚರಾಗುವುದೊಳಿತು. ಹಣ ಅಧಿಕಾರ ಇರುವವರ ಮುಂದೆ ನೀವು ಕೇವಲ ಟೈರ್ ಕೆಳಗಿಡುವ ಲಿಂಬೆಹಣ್ಣು ಅಷ್ಟೇ ಎಂದು ವಾಗ್ದಾಳಿ ನಡೆಸಿದೆ.
ಸಿಎಂ ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಮೂಲತಃ ಜನತಾ ಪರಿವಾರದ ಕಾರ್ಯಕರ್ತರು. ಸುಧಾಕರ್, ಮುನಿರತ್ನ ಸೇರಿದಂತೆ ನಿಮ್ಮಲ್ಲಿರುವ 16ಕ್ಕೂ ಹೆಚ್ಚು ಮಂದಿ ಮೂಲತಃ ಕಾಂಗ್ರೆಸ್ ಕಾರ್ಯಕರ್ತರು. ಅವರ ಮೇಲೆ ಕಣ್ಣಿಟ್ಟಿರಿ, ಸ್ವಲ್ಪ ಹುಷಾರಾಗಿರಿ, ಅವರೆಲ್ಲರೂ ಬಿಜೆಪಿಯನ್ನು ಮುಗಿಸುವ ಟೂಲ್ ಕಿಟ್ ಭಾಗವೇ ಎಂದು ಪ್ರಶ್ನಿಸಿದೆ.
ಮಾಧ್ಯಮಗಳಿಗೆ – ಹಲಾಲ್ ಕಟ್, ಜಟ್ಕಾ ಕಟ್ ಜನತೆಗೆ – ಬೆಲೆ ಏರಿಕೆಯ ಜೇಬು ಕಟ್, ಗುತ್ತಿಗೆದಾರರಿಗೆ – 40% ಕಮಿಷನ್ ಕಟ್, ಯುವಕರಿಗೆ – ಉದ್ಯೋಗ ಕಟ್, ವಿದ್ಯಾರ್ಥಿಗಳಿಗೆ – ವಿದ್ಯಾರ್ಥಿ ವೇತನ ಕಟ್, ವಿದ್ಯೆ ಕಟ್ , ಬಡವರಿಗೆ – ಅನ್ನಭಾಗ್ಯದ ಅನುದಾನ ಕಟ್ , ರೈತರಿಗೆ – ವಿದ್ಯುತ್ ಕಟ್, ಬೆಂಬಲ ಬೆಲೆ ಕಟ್ ಇದೇ ಬಿಜೆಪಿ ಸಾಧನೆ! ಎಂದು ವ್ಯಂಗ್ಯವಾಡಿದೆ.