ಬೆಳಗಾವಿ: ಬಿಜೆಪಿ ಕಾರ್ಯಕರ್ತನ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಘಟನೆ ನಡೆದಿದೆ ಎಂಬ ಮಾಹಿತಿ ಇದೆ. ಪೊಲೀಸರು ತನಿಖೆ ಮಾಡಿ ಏನಾಗಿದೆ ಎಂದು ವರದಿ ನೀಡಲಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸುತ್ತಮುತ್ತಲಿನ ಸಿಸಿಟಿವಿ ಆಧರಿಸಿ ಮಾಹಿತಿ ನೀಡಲು ಸೂಚಿಸಿದ್ದೇನೆ. ಘಟನೆ ಆಗಿರೋದು ಗೊತ್ತಿರುವ ಹಿನ್ನೆಲೆ ಪರಿಶೀಲಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ ಎಂದರು.
ಘಟನೆ ನಡೆದಾಗ ಕಾರಿನಲ್ಲಿ ಚನ್ನರಾಜ ಹಟ್ಟಿಹೊಳಿ ಇದ್ದರು ಎಂಬ ವಿಚಾರಕ್ಕೆ, ಪೊಲೀಸರು ತನಿಖೆ ಮಾಡುತ್ತಿದ್ದಾರೆ, ವಾಹನ ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ. ವರದಿ ಹಾಗೂ ದಾಖಲೆಗಳು ಸಿಕ್ಕ ಬಳಿಕ ಮಾತನಾಡುತ್ತೇನೆ ಎಂದು ಹೇಳಿದರು. ಬೆಳಗಾವಿ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂಬ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಯಿಸಿ, ಅವರು ಹಾಗೇ ಹೇಳುತ್ತಿರುತ್ತಾರೆ. ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದರೆ ಮತ್ತೆ ಯಾರ ಮೇಲೆ ನಂಬಿಕೆ ಇರುತ್ತದೆ. ಯಾರನ್ನಾದರೂ ನಂಬಬೇಕು ಅಲ್ಲವೇ. ನಮಗೆ ಬೇಕಾದಾಗ ನಂಬಿಕೆ ಇರುತ್ತದೆ. ನಮಗೆ ಬೇಡವಾದಾಗ ಇರುವುದಿಲ್ಲ. ಹಾಗೆ ನಡೆಯುವುದಿಲ್ಲ. ಪೊಲೀಸ್ ಇಲಾಖೆ ಎಲ್ಲರಿಗೂ ನ್ಯಾಯ ಒದಗಿಸುತ್ತದೆ ಎಂದು ತಿಳಿಸಿದರು.