ಬೆಂಗಳೂರು: ‘ಸಿದ್ದರಾಮಯ್ಯ ಹಾಗೂ ನನ್ನನ್ನು ನೆನಪಿಸಿಕೊಳ್ಳದಿದ್ದರೆ ಬಿಜೆಪಿಯವರಿಗೆ ನಿದ್ದೆ ಬರುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂದರ್ಭ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಬಿಜೆಪಿಯವರು ನಿತ್ಯ ಮಲಗುವ ಮುನ್ನ ನಮ್ಮನ್ನು ನೆನಪಿಸಿಕೊಳ್ಳಬೇಕು. ಅವರು ನಮ್ಮನ್ನು ಬಹಳ ಪ್ರೀತಿಸುತ್ತಾರೆ. ಹೀಗಾಗಿ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ’ ಎಂದು ಛೇಡಿಸಿದರು.
ಸಿದ್ದರಾಮಯ್ಯನವರ ಹುಟ್ಟುಹಬ್ಬ ಕಾರ್ಯಕ್ರಮ ನಂತರ ಕಾಂಗ್ರೆಸ್ ಹೋಳಾಗಲಿದೆ ಎಂಬ ಪ್ರಶ್ನೆಗೆ, ‘ಕಾಂಗ್ರೆಸ್ ಪಕ್ಷ ಒಡೆದು ಹೋಳಾಗಲು ಕುಂಬಳಕಾಯಿಯು ಅಲ್ಲ, ಮಡಿಕೆಯೂ ಅಲ್ಲ’ ಎಂದು ತಿರುಗೇಟು ಕೊಟ್ಟರು.
ಪಿಎಸ್ ಐ ಹಗರಣದಲ್ಲಿ ಬಂಧಿತರಾಗಿರುವ ಐಪಿಎಸ್ ಅಧಿಕಾರಿ ಮಂಪರು ಪರೀಕ್ಷೆ ಮಾಡಬೇಕು ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ತನಿಖಾಧಿಕಾರಿಗಳು ಕೇವಲ 50 ಜನರನ್ನು ಮಾತ್ರ ಬಂಧಿಸಿದ್ದಾರೆ. ನಾವು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದು, ಅದನ್ನು ಮಾಡಲಿಲ್ಲ. ಕನಿಷ್ಠಪಕ್ಷ ಬಂಧಿತರನ್ನು ಸೆಕ್ಷನ್ 164 ಪ್ರಕಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿಕೊಳ್ಳಬೇಕು. ಆರೋಪಪಟ್ಟಿಯಲ್ಲಿ ಬೇರೆ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂದು ಹೇಳಲಾಗಿದ್ದು, ಅವುಗಳ ತನಿಖೆಯನ್ನೂ ಮಾಡಬೇಕು. ಈ ಅಕ್ರಮದಲ್ಲಿ ಮುಖ್ಯಮಂತ್ರಿಗಳು, ಸಚಿವರು ಭಾಗಿಯಾಗಿಲ್ಲ ಎಂದಾದರೆ ತನಿಖೆ ಮಾಡಲು ಭಯ ಏಕೆ? ಅವರ ಕಚೇರಿಯೂ ಭಾಗಿಯಾಗಿದೆ. ಗೃಹ ಸಚಿವರು ಹಾಗೂ ಶಿಕ್ಷಣ ಸಚಿವರ ಒತ್ತಡದ ಮೇರೆಗೆ ಅಭ್ಯರ್ಥಿಗಳನ್ನು ವಿಚಾರಣೆ ಮಾಡದೆ ಕಳುಹಿಸಲಾಗಿತ್ತು. 15 ದಿನಗಳ ನಂತರ ಸಚಿವರು ಹಣ ಹಿಂತಿರುಗಿಸುವುದಾಗಿ ಹೇಳಿ ನಂತರ ಆ ಅಭ್ಯರ್ಥಿಯನ್ನು ಶರಣಾಗತಿ ಮಾಡಿಸಿದ್ದಾರೆ. ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಅವರು ರಾಜ್ಯದಲ್ಲೇ ಅತ್ಯಂತ ಭ್ರಷ್ಟ ರಾಜಕಾರಣಿಯಾಗಿದ್ದಾರೆ ‘ ಎಂದು ಟೀಕಿಸಿದರು.
ತನಿಖಾಧಿಕಾರಿಗಳು ನಿಷ್ಪಕ್ಷಪಾತ ತನಿಖೆ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ, ‘ ನನ್ನ ಪ್ರಕಾರ ಪ್ರಾಮಾಣಿಕ ತನಿಖೆ ಆಗುತ್ತಿಲ್ಲ. ಅಧಿಕಾರಿಯೇ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಸಿದ್ಧವಾಗಿರುವಾಗ ಏಕೆ ದಾಖಲಿಸುತ್ತಿಲ್ಲ? ನಮಗೆ ಬಂದಿರುವ ಮಾಹಿತಿ ಪ್ರಕಾರ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಕೆಲವರ ಹೆಸರು ಹಾಗೂ ಹಗರಣ ಹಣದ ಪ್ರಮಾಣದ ಬಗ್ಗೆ ಪ್ರಸ್ತಾಪಿಸಿದ್ದು, ಯತ್ನಾಳ್ ಅವರು ಕೂಡ ಕೆಲವು ವಿಚಾರ ಹೇಳಿದ್ದಾರೆ. ಆದರೂ ಈ ವಿಚಾರವಾಗಿ ಯಾವುದೇ ತನಿಖೆ ನಡೆಯುತ್ತಿಲ್ಲ ಎಂದು ಹೇಳಿದರು.
ಪ್ರವಾಹ ಸಂದರ್ಭದಲ್ಲಿ ಬಿಜೆಪಿ ಶಾಸಕರು ನಾಯಕರು ಹೋಟೆಲ್ ನಲ್ಲಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಬಿಜೆಪಿಯಲ್ಲಿ ಬಹಳ ಆಂತರಿಕ ಭಿನ್ನಾಭಿಪ್ರಾಯವಿದೆ. ಹೀಗಾಗಿ ಅವರಲ್ಲಿ ಭಯ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅವರ ರಾಷ್ಟ್ರೀಯ ನಾಯಕರು ಪದೇ, ಪದೆ ರಾಜ್ಯಕ್ಕೆ ಬಂದು ಹೋಗುತ್ತಿದ್ದಾರೆ. ಮೂಲ ಬಿಜೆಪಿಯವರು ಈ ಸರ್ಕಾರ ನಡೆಸುತ್ತಿಲ್ಲ. ಇದೊಂದು ಮೈತ್ರಿ ಸರ್ಕಾರ ಇದ್ದಂತೆ. ಮುಖ್ಯಮಂತ್ರಿಗಳನ್ನು ಹೊರತುಪಡಿಸಿ ಅನೇಕ ಸಚಿವರು ಕಾಂಗ್ರೆಸ್ ಹಾಗೂ ದಳದಿಂದ ಹೋದ ಶಾಸಕರಾಗಿದ್ದಾರೆ. ಹೀಗಾಗಿ ಅವರಲ್ಲಿ ಆತಂಕ ಹೆಚ್ಚಾಗಿದೆ. ಪಿಎಸ್ಐ ನೇಮಕ ಅಕ್ರಮ ವಿಚಾರವಾಗಿ ನಮ್ಮ ನಾಯಕರು ಮಾತನಾಡಿದಾಗ ಅವರಿಗೆ ನೊಟೀಸ್ ಕೊಟ್ಟರು. ಇದೇ ರೀತಿ ಬಿಜೆಪಿಯ ನಾಯಕರಾದ ಯತ್ನಾಳ್ ಹಾಗೂ ವಿಶ್ವನಾಥ್ ಅವರೂ ಭ್ರಷ್ಟಾಚಾರ ಆರೋಪ ಮಾಡಿದಾಗ ಅವರಿಗೆ ಯಾಕೆ ನೊಟೀಸ್ ನೀಡಲಿಲ್ಲ? ಅವರ ವಿಚಾರಣೆ ನಡೆಸಿ ಮಾಹಿತಿ ಪಡೆಯಲಿಲ್ಲ ಯಾಕೆ? ಈ ಪ್ರಕರಣದಲ್ಲಿ ಪ್ರಭಾವಿ ಸಚಿವರು, ಅಧಿಕಾರಿಗಳ ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿದೆ. ಅವರು ಪ್ರಾಮಾಣಿಕ ಅಧಿಕಾರಿಗಳಾಗಿದ್ದರೆ ಬಂಧಿತರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿ ಸೆಕ್ಷನ್ 164 ಪ್ರಕಾರ ಹೇಳಿಕೆ ಸಂಗ್ರಹಿಸಬೇಕು ‘ ಎಂದು ತಿಳಿಸಿದರು.
ಇನ್ನು ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಕೇವಲ ಈಶ್ವರಪ್ಪ ಮಾತ್ರವಲ್ಲ, ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬೇರೆ ಸಚಿವರನ್ನೂ ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲಂಚ, ಮಂಚದ ಪ್ರಕರಣದಿಂದ ಹಿಡಿದು ಆಸ್ಪತ್ರೆ ಬೆಡ್, ಪರಿಹಾರ ಪ್ರಕರಣದವರೆಗೂ ಎಲ್ಲದರಲ್ಲೂ ಸಚಿವರನ್ನು ರಕ್ಷಿಸುವ ಪ್ರಯತ್ನ ಆಗುತ್ತಿದೆ. ಈ ಕಾರಣಕ್ಕೆ ಗುತ್ತಿಗೆದಾರರ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಸಚಿವ ನಿರಾಣಿ, ಕಾರಜೋಳ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಲ್ಲರೂ ಸಂತೋಷ್ ಪಾಟೀಲ್ ಕಾಮಗಾರಿ ಪೂರ್ಣಗೊಳಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಸಚಿವರ ಅನುಮತಿ ಇಲ್ಲದೆ ಈ ರೀತಿ ಕಾಮಗಾರಿ ಮಾಡಲು ಸಾಧ್ಯವೇ? ಸಚಿವರು ಕಮಿಷನ್ ಕೇಳಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಹೇಳಿಕೊಂಡಿದ್ದಾರೆ. ಇನ್ನು ಕಮಿಷನ್ ವಿಚಾರವಾಗಿ ಸ್ವಾಮೀಜಿಗಳು ಆರೋಪ ಮಾಡಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಏನು ಬೇಕು? ‘ ಎಂದು ಉತ್ತರಿಸಿದರು.
ಆಗ್ನಿಪತ್ ಯೋಜನೆ ವಿರೋಧಿಸುವವರು ದೇಶ ವಿರೋಧಿಗಳು ಎಂಬ ಹೇಳಿಕೆ ಕುರಿತು ಕೇಳಿದಾಗ, ‘ ಅವರು ರಾಷ್ಟ್ರೀಯವಾದಿ ಅಲ್ಲವೇ, ಅವರು ಮೊದಲು ತಮ್ಮ ಮಕ್ಕಳನ್ನು ಈ ಯೋಜನೆ ಮೂಲಕ ಸೇನೆಗೆ ಸೇರಿಸಲಿ. ಬಿಜೆಪಿ ಮಂತ್ರಿಗಳು ಮೊದಲು ತಮ್ಮ ಮಕ್ಕಳನ್ನು ಸೇರಿಸಿ ನಾಲ್ಕು ವರ್ಷ ದೇಶ ಸೇವೆ ಮಾಡಿಸಲಿ. ಅವರ ಮಕ್ಕಳು ಮಾತ್ರ ಡಾಕ್ಟರ್, ಇಂಜಿನಿಯರ್, ಉದ್ಯಮಿಗಳಾಗಬೇಕು. ಬಡವರ ಮಕ್ಕಳು ಗಾರ್ಡ್ ಕೆಲಸಕ್ಕೆ ಸೇರಬೇಕಾ?’ ಎಂದು ಪ್ರಶ್ನಿಸಿದರು.