ಜನರ ಅಸಹನೆಯನ್ನು ತಣಿಸಲು ತಬ್ಲೀಗಿಗಳನ್ನು ಬಲಿಪಶು ಮಾಡುತ್ತಿರುವ ಬಿಜೆಪಿ: ಅಬ್ದುಲ್ ಮಜೀದ್ ಟೀಕೆ
Prasthutha: January 15, 2022

ಬೆಂಗಳೂರು: ಮೊದಲಿಗೆ ನಮಸ್ತೆ ಟ್ರಂಪ್ ಕಾರ್ಯಕ್ರಮದ ಮೂಲಕ ಕೋವಿಡ್ ಸೋಂಕನ್ನು ದೇಶಾದ್ಯಂತ ಹಂಚಿದ BJP, ಉಪಚುನಾವಣೆಗಳಲ್ಲಿ ಬೃಹತ್ ರಾಲಿ ನಡೆಸಿ 2ನೇ ಅಲೆಯಲ್ಲಿ ಜನರಿಗೆ ಮಾರಣಾಂತಿಕ ಆಘಾತ ನೀಡಿತು. ಕೋವಿಡ್ ನಿರ್ವಹಣೆಯಲ್ಲಿನ ತನ್ನ ಗಂಭೀರ ವೈಫಲ್ಯ ತಬ್ಲೀಗಿಗಳ ತಲೆಗೆ ಕಟ್ಟಿದ ಹೊಣೆಗೇಡಿ ಬಿಜೆಪಿ ಸರ್ಕಾರ ಇದೀಗ ಮತ್ತೇ ತನ್ನ ಚಾಳಿ ಪ್ರದರ್ಶಿಸುತ್ತಿದೆ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ತಲೆಬುಡವಿಲ್ಲದ ಲಾಕ್ ಡೌನ್ ಹೇರಿ ದೇಶದ ಜನರನ್ನು ಬೀದಿಗೆ ತಂದು ನಿಲ್ಲಿಸಿದ BJP, ಜನರ ಅಸಹನೆಯನ್ನು ತಣಿಸಲು ತಬ್ಲೀಗಿಗಳನ್ನು ಬಲಿಪಶು ಮಾಡಿತು. ತಬ್ಲೀಗಿ ಎಂದು ತಿಪ್ಪರಲಾಗ ಹಾಕುತ್ತಿರುವ ಬಿಜೆಪಿ ರಾಜಕೀಯ ಲಾಭಕ್ಕಾಗಿ ಆಯೋಜಿಸಿದ ಕುಂಭಮೇಳವು 2ನೇ ಅಲೆಯ ವೇಳೆ ಕೊರೋನ ಸೂಪರ್ ಸ್ಪ್ರೆಡರ್ ಆಗಿ ಮಾರ್ಪಟ್ಟಿದ್ದನ್ನು ಬಚ್ಚಿಡುತ್ತಿದೆ ಎಂದು ಆರೋಪಿಸಿದ್ದಾರೆ.
