►► ಓರ್ವ ಇನ್ ಸ್ಪೆಕ್ಟರ್, ಇಬ್ಬರು ಪೇದೆ ಅಮಾನತು
ಬರೇಲಿ: ಯುವತಿಯೋರ್ವಳ ಅಪಹರಣವಾಗಿದ್ದು ಪೊಲೀಸರು ನಿರ್ಲಕ್ಷಿಸಿದ್ದಾರೆಂದು ಆರೋಪಿಸಿ ಬಿಜೆಪಿ ಮತ್ತು ವಿ.ಎಚ್.ಪಿ ಕಾರ್ಯಕರ್ತರು ಇಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ದಾಂಧಲೆ ನಡೆಸಿದ್ದಾರೆ.
‘ಅಪಹರಣ’ಕ್ಕೊಳಗಾಗಿದ್ದಾಳೆ ಎನ್ನಲಾಗಿರುವ ಹುಡುಗಿ ತಾನು ಪ್ರಬುದ್ಧಳಾಗಿದ್ದು, ತನ್ನ ಪ್ರಿಯಕರ ಬಿಲಾಲ್ ಜೊತೆ ಇರುವುದಾಗಿ ವೀಡಿಯೊ ಬಿಡುಗಡೆಗೊಳಿಸಿರುವ ಹೊರತಾಗಿಯೂ ಬಿಜೆಪಿ, ವಿ.ಎಚ್.ಪಿ ಕಾರ್ಯಕರ್ತರು ಮಂಗಳವಾರದಂದು ಕಿಲಾ ಪೊಲೀಸ್ ಠಾಣೆಗೆ ದಾಳಿ ನಡೆಸಿ ಅಲ್ಲಿನ ಪೀಠೋಪಕರಣಗಳಿಗೆ ಹಾನಿ ಮಾಡಿದ್ದಾರೆ.
ವೀಡಿಯೊವನ್ನು ಒತ್ತಡಲ್ಲಿ ಮಾಡಲಾಗಿದೆ. ಬಿಲಾಲ್ ಹಾಗೂ ಆತನ ಸ್ನೇಹಿತರನ್ನು ಪತ್ತೆಹಚ್ಚಬೇಕೆಂದು ವಿ.ಎಚ್.ಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ವಿಷಯ ತಿಳಿದು ನಗರದ ಬಿಜೆಪಿ ಶಾಸಕ ಅರುಣ್ ಕುಮಾರ್ ಮತ್ತು ಬಿಥ್ರಿ ಶಾಸಕ ಪಪ್ಪು ಭರ್ತಾವುಲ್ ಕೂಡ ಪೊಲೀಸ್ ಠಾಣೆ ತಲುಪಿದ್ದರು.
ಬಿಜೆಪಿ ಮತ್ತು ವಿ.ಎಚ್.ಪಿ ಕಾರ್ಯಕರ್ತರು ಹಲವು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಬೀಡುಬಿಟ್ಟಿದ್ದರು. ನಂತರ ಅವರನ್ನು ಚದುರಿಸುವುದಕ್ಕಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಘಟನೆಯ ಹಿನ್ನೆಲೆಯಲ್ಲಿ, ಕಿಲಾ ಠಾಣೆಯ ಇನ್ ಸ್ಪೆಕ್ಟರ್ ಮತ್ತು ಮಲುಕ್ಪುರ್ ಹೊರಠಾಣೆಯ ಇಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಎಫ್.ಐ.ಆರ್ ಗಳನ್ನು ದಾಖಲಿಸಲಾಗಿದೆ ಎಂದು ಬರೇಲಿಯ ಹಿರಿಯ ವರಿಷ್ಠಾಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ಹೇಳಿದ್ದಾರೆ.
ವೀಡಿಯೊ ಕೃಪೆ: ನ್ಯೂಸ್ ನೇಶನ್