ಬೆಂಗಳೂರು: ವಿರೋಧ ಪಕ್ಷಗಳನ್ನು ಸದೆಬಡಿದು ಮತ್ತೆ ಅಧಿಕಾರಕ್ಕೆ ಬರುವ ಮನಸ್ಥಿತಿಯಿಂದ ಬಿಜೆಪಿಯವರು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ದೂರಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನಿಖಾ ಸಂಸ್ಥೆಗಳ ಕಾರ್ಯ ನಿರಂತರವಾಗಿ ನಡೆಯುತ್ತದೆ. ಆದರೆ, ಇಷ್ಟು ದಿನ ಸುಮ್ಮನಿದ್ದು ಚುನಾವಣೆ ಸಂದರ್ಭದಲ್ಲಿ ಆಸಕ್ತಿ ತೋರಿಸಿರುವುದು ಯಾಕೆ? ಆದಾಯ ತೆರಿಗೆ ಇಲಾಖೆಯವರು ಈಗ ತೆರಿಗೆ ಕಟ್ಟುವಂತೆ ನೋಟಿಸ್ ನೀಡುತ್ತಿರುವುದರ ಅರ್ಥವೇನು? ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಯಾವ ಉದ್ದೇಶಕ್ಕಾಗಿ ಜಪ್ತಿ ಮಾಡಲಾಗಿದೆ’ ಎಂದು ಪ್ರಶ್ನಿಸಿದರು.