ಬೆಂಗಳೂರು: ನಾಳೆ ನಡೆಯುವ ಚಿಂತನ ಸಭೆಯ ಕುರಿತು ಇಂದು ಚರ್ಚಿಸಲಾಗಿದೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ಉಪಸ್ಥಿತಿಯಲ್ಲಿ ಈ ಚರ್ಚೆ ನಡೆದಿದೆ. ಸಂಘಟನೆ ವಿಚಾರ, ಪಕ್ಷವನ್ನು ಇನ್ನಷ್ಟು ಬಲಪಡಿಸುವುದು, ಮುಂಬರುವ ಚುನಾವಣೆ ಎದುರಿಸುವ ಕುರಿತು ನಾಳೆ ಚರ್ಚಿಸಿ ಅಗತ್ಯ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾಳೆ ಬೆಳಿಗ್ಗೆ 9 ಗಂಟೆಗೆ ಸಭೆ ಪ್ರಾರಂಭವಾಗಲಿದೆ. ಈ ಮೇಲಿನ ವಿಷಯಗಳಲ್ಲದೆ ಬೇರೆ ಬೇರೆ ವಿಷಯಗಳೂ ಚರ್ಚೆಗೆ ಒಳಪಡಬಹುದು. ಮುಕ್ತವಾಗಿ ಚಿಂತನೆಗೆ ನಾವು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ವಿವರಿಸಿದರು.
ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯರು, ಸಚಿವ ಸಂಪುಟದ ಎಲ್ಲ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. 50ಕ್ಕೂ ಹೆಚ್ಚು ಜನ ರಾಜ್ಯ ಪ್ರಮುಖರೂ ಭಾಗವಹಿಸುವ ಸಭೆ ಇದಾಗಿದೆ. ನಾಳೆ ಚರ್ಚೆಯ ಬಳಿಕ ಸಂಪೂರ್ಣ ಚಿತ್ರಣ ಲಭಿಸಲಿದೆ ಎಂದು ಅವರು ಹೇಳಿದರು. ಅರುಣ್ ಸಿಂಗ್, ನಳಿನ್‍ಕುಮಾರ್ ಕಟೀಲ್ ಮತ್ತು ಇತರ ಮುಖಂಡರು ಈ ಸಂದರ್ಭದಲ್ಲಿ ಇದ್ದರು.