Home ಟಾಪ್ ಸುದ್ದಿಗಳು ರೈತರ ಪರ ಮಾತನಾಡಿದ ಮಾಜಿ ಸಚಿವನನ್ನು ಉಚ್ಚಾಟಿಸಿದ ಬಿಜೆಪಿ

ರೈತರ ಪರ ಮಾತನಾಡಿದ ಮಾಜಿ ಸಚಿವನನ್ನು ಉಚ್ಚಾಟಿಸಿದ ಬಿಜೆಪಿ

ಪಂಜಾಬ್: ರೈತರ ವಿಚಾರದಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವವನ್ನು ಪ್ರಶ್ನಿಸಿದ ಸುಮಾರು ಒಂದು ತಿಂಗಳ ನಂತರ, ಪಂಜಾಬ್ ಬಿಜೆಪಿ ಘಟಕವು ಮಾಜಿ ಸಚಿವ ಅನಿಲ್ ಜೋಶಿಯನ್ನು ಪಕ್ಷ ವಿರೋಧಿ ಪ್ರತಿಪಾದನೆಗಾಗಿ ಹೊರಹಾಕಿದೆ ಎಂದು ವರದಿಯಾಗಿದೆ. ಪಕ್ಷದ ಹೇಳಿಕೆಯ ಪ್ರಕಾರ, ಜೋಶಿಯನ್ನು ರಾಜ್ಯ ಘಟಕದ ಮುಖ್ಯಸ್ಥ ಅಶ್ವನಿ ಶರ್ಮಾ ಅವರ ನಿರ್ದೇಶನದ ಮೇರೆಗೆ ಹೊರಹಾಕಲಾಯಿದೆ.

ಅನಿಲ್‌ ಜೋಶಿ ಅವರು ಪಕ್ಷದ ವಿರುದ್ದದ ನಡೆಯನ್ನು ಬಿಡದೆ ಇರುವುದರಿಂದ, ಶಿಸ್ತು ಸಮಿತಿಯ ಶಿಫಾರಸುಗಳ ಮೇರೆಗೆ ರಾಜ್ಯ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ, ಅವರನ್ನು ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಒಕ್ಕೂಟ ಸರ್ಕಾರದ ನೀತಿಗಳ ವಿರುದ್ಧ ನೀಡಿದ್ದ ತನ್ನ ಇತ್ತೀಚಿನ ಹೇಳಿಕೆಗಳ ಕುರಿತು ವಿವರಣೆ ನೀಡಲು ಪಕ್ಷವು ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು. ವಿಶೇಷವಾಗಿ, ಅವರು ಮೂರು ಕೃಷಿ ಕಾನೂನುಗಳ ವಿರುದ್ದ ಪ್ರತಿಭಟಿಸುತ್ತಿರುವ ರೈತರ ಬಗ್ಗೆ ಮಾತನಾಡಿದ್ದರು.

ಅನಿಲ್‌ ಜೋಶಿ ಅವರು ಒಕ್ಕೂಟ ಸರ್ಕಾರ, ಪಕ್ಷದ ಕೇಂದ್ರ ನಾಯಕತ್ವ ಮತ್ತು ನೀತಿಗಳ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ನೋಟಿಸ್ ಉಲ್ಲೇಖಿಸಿತ್ತು.ಶೋಕಾಸ್ ನೋಟಿಸ್‌ಗೆ ಅನಿಲ್‌ ಜೋಶಿ ಎರಡು ಪುಟಗಳ ಉತ್ತರ ನೀಡಿದ್ದು, ಅವರಲ್ಲಿ “ತಾನು ಎಂದಿಗೂ ಒಕ್ಕೂಟ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ಮಾತನಾಡಿಲ್ಲ. ರೈತರ ಬಗ್ಗೆ ವಿವೇಚನೆಯಿಲ್ಲದೆ ಮಾತನಾಡುವ ಪಕ್ಷದ ರಾಜ್ಯ ಮುಖ್ಯಸ್ಥರನ್ನು ಕೇಳಿದ್ದೆ” ಎಂದು ಹೇಳಿದ್ದಾರೆ.

ಉತ್ತರ ಅಮೃತಸರದ ಮಾಜಿ ಶಾಸಕರೂ ಆಗಿರುವ ಅನಿಲ್ ಜೋಶಿ, ತಾನು ಯಾವಾಗಲೂ ಪಕ್ಷದ ಹಿತಾಸಕ್ತಿಗಳ ಬಗ್ಗೆ ಮಾತನಾಡುತ್ತೇನೆ ಎಂದು ಪ್ರತಿಪಾದಿಸಿದ್ದಾರೆ. “ನಾನು ಒಕ್ಕೂಟ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ಅಥವಾ ಕೇಂದ್ರ ನಾಯಕರ ವಿರುದ್ಧ ಮಾತನಾಡಲಿಲ್ಲ” ಎಂದು ಉತ್ತರದಲ್ಲಿ ಹೇಳಿದ್ದಾರೆ.

Join Whatsapp
Exit mobile version