ಆಪ್ ಶಾಸಕರು ಪಕ್ಷ ತೊರೆಯಲು ಬಿಜೆಪಿಯಿಂದ 20 ಕೋಟಿ ಆಫರ್
ನವದೆಹಲಿ: ವಿವಿಧ ರಾಜ್ಯಗಳಲ್ಲಿನ ಬಿಜೆಪಿಯೇತರ ಪಕ್ಷಗಳನ್ನು ಉರುಳಿಸಲು ಬೇಕಾಗಿ ಬಿಜೆಪಿ ಸರ್ಕಾರವು ಈವರೆಗೆ ಬರೋಬ್ಬರಿ 6,300 ಕೋಟಿಯಷ್ಟು ಹಣ ಖರ್ಚು ಮಾಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ಧಾಳಿ ಮಾಡಿದ್ದಾರೆ.
ಬಿಜೆಪಿಯು ಇದುವರೆಗೆ 277 ಶಾಸಕರನ್ನು ಖರೀದಿ ಮಾಡಿದೆ ಎಂದು ಆರೋಪಿಸಿದ ಅವರು ದೇಶ ಬೆಲೆಏರಿಕೆ ಮತ್ತು ನಿರೋದ್ಯೋಗದಿಂದ ತತ್ತರಿಸಿ ಹೋಗುತ್ತಿರುವಾಗ ಬಿಜೆಪಿ ಮಾತ್ರ ವಿರೋಧ ಪಕ್ಷಗಳನ್ನು ಕೆಡವಲು ಮತ್ತು ವಿಪಕ್ಷ ಶಾಸಕರನ್ನು ಸೆಳೆಯಲು ಹಣ ಖರ್ಚು ಮಾಡುತ್ತಿದೆ ಎಂದು ಹೇಳಿದರು.
ಆಪ್ ತೊರೆದು ಬಿಜೆಪಿ ಸೇರಲು ಶಾಸಕರಿಗೆ 20 ಕೋಟಿ ಆಫರ್ ನೀಡುತ್ತಿದ್ದಾರೆ. ಹಣಬಲದ ಮೂಲಕ ಸರ್ಕಾರವನ್ನು ಬುಡಮೇಲು ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಪ್ರಧಾನಿ ಸಹಿತ ಬಿಜೆಪಿ ನಾಯಕರು ಆಪ್ ನ 40 ಶಾಸಕರನ್ನು ಸೆಳೆಯಲು ನೋಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವು ಬೇರೆ ಬೇರೆ ಸರ್ಕಾರವನ್ನು ಉರುಳಿಸಲು ಬೇಕಾಗಿ ಈ ರೀತಿ ಹಣ ಖರ್ಚು ಮಾಡದೇ ಇರುತ್ತಿದ್ದರೆ ಮೊಸರು, ಮಜ್ಜಿಗೆ , ಹಾಲು, ತುಪ್ಪ ಮುಂತಾದ ವಸ್ತುಗಳಿಗೆ ಬೆಲೆಏರಿಕೆ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ದೂರಿದ್ದಾರೆ.