ಲಖ್ನೋ: ರಾಜಕೀಯ ಪಕ್ಷಗಳ ಚುನಾವಣಾ ಭರವಸೆಗಳು ಜನರ ದಾರಿ ತಪ್ಪಿಸುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ, ಎಸ್ಪಿ ಮತ್ತು ಕಾಂಗ್ರೆಸ್ ಚುನಾವಣೆ ಸಮಯದಲ್ಲಿ ಭರವಸೆ ನೀಡಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ನಿರ್ಲಕ್ಷಿಸುವ ಮೂಲಕ ಉತ್ತರ ಪ್ರದೇಶದ ಜನರನ್ನು ತಪ್ಪುದಾರಿಗೆಳೆಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಬಿಜೆಪಿ, ಎಸ್ಪಿ ಮತ್ತು ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಚುನಾವಣೆಗೂ ಮುನ್ನ ಭರವಸೆಗಳ ಸುರಿಮಳೆಗೈಯ್ಯುವ ಮೂಲಕ ಜನರನ್ನು ತಪ್ಪುದಾರಿಗೆಳೆಯುತ್ತವೆ. ಅಧಿಕಾರಕ್ಕೆ ಬಂದ ಬಳಿಕ ಬಹುತೇಕ ಭರವಸೆಗಳನ್ನು ಮರೆಯುವುದೇ ಇವುಗಳ ಇತಿಹಾಸ. ಹಾಗಾಗಿ, ಜನರು ಜಾಗೃತರಾಗಿರಬೇಕು” ಎಂದಿದ್ದಾರೆ.
“ಬಿಜೆಪಿ ಮತ್ತು ಎಸ್ಪಿ ಅಧಿಕಾರದಲ್ಲಿದ್ದಾಗ ಈಗ ಅವರು ನೀಡುತ್ತಿರುವ ಭರವಸೆಗಳನ್ನು ಏಕೆ ಈಡೇರಿಸಲಿಲ್ಲ? ಮಹಿಳೆಯರಿಗೆ ಶೇ 40ರಷ್ಟು ಚುನಾವಣೆ ಟಿಕೆಟ್ ಮತ್ತು ಸ್ಕೂಟರ್ ನೀಡುವ ತನ್ನ ಭರವಸೆಯನ್ನು ಕಾಂಗ್ರೆಸ್ ಏಕೆ ಪೂರೈಸಲಿಲ್ಲ? ಈ ಮೂರು ಪಕ್ಷಗಳು ಅಧಿಕಾರದಲ್ಲಿದ್ದಾಗ ತಾವು ನೀಡಿದ್ದ ಆಶ್ವಾಸನೆಗಳನ್ನು ಏಕೆ ಪೂರ್ಣಗೊಳಿಸಲಿಲ್ಲ? ಈ ಬಗ್ಗೆ ಜನರು ಯೋಚಿಸಬೇಕಿದೆ” ಎಂದು ತಿಳಿಸಿದ್ದಾರೆ