ಗುವಾಹಟಿ: ಗುಜರಾತ್ ನಲ್ಲಿ ಶಿವಸೇನೆ ಪಕ್ಷದ 33 ಬಂಡಾಯ ಶಾಸಕರೊಂದಿಗೆ ಬೀಡುಬಿಟ್ಟಿದ್ದ ಶಿವಸೇನೆ ನಾಯಕ ಏಕನಾಥ್ ಶಿಂಧೆ ಸೂರತ್ ನಗರದ ಡುಮಾಸ್ ರಸ್ತೆಯಲ್ಲಿರುವ ತಮ್ಮ ಹೋಟೆಲ್ ನಿಂದ ಬುಧವಾರ ಮುಂಜಾನೆ ಅಸ್ಸಾಂನ ಗುವಾಹಟಿಗೆ ಹಾರಿದ್ದಾರೆ. ಕೆಲವು ನಿಗೂಡ ಕಾರಣಗಳಿಂದಾಗಿ ಶಾಸಕರನ್ನು ಬಿಜೆಪಿ ಆಡಳಿತದ ಮತ್ತೊಂದು ರಾಜ್ಯ ಅಸ್ಸಾಂಗೆ ವಿಮಾನದ ಮೂಲಕ ಸ್ಥಳಾಂತರಿಸಲಾಯಿತು ಎನ್ನಲಾಗಿದೆ.
ಗುವಾಹಟಿಗೆ ತೆರಳುವ ಮೊದಲು, ಶಿಂಧೆ ಅವರು ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆಯನ್ನು ತೊರೆದಿಲ್ಲ ಎಂದು ಹೇಳಿದ್ದರು. ನಾವು ಬಾಳಾಸಾಹೇಬ್ ಠಾಕ್ರೆ ಅವರ ಶಿವಸೇನೆಯನ್ನು ಬಿಟ್ಟಿಲ್ಲ ಮತ್ತು ಅದನ್ನು ಬಿಡುವುದಿಲ್ಲ. ನಾವು ಬಾಳಾಸಾಹೇಬ್ ಅವರ ಹಿಂದುತ್ವವನ್ನು ಅನುಸರಿಸುತ್ತಿದ್ದೇವೆ ಮತ್ತು ಅದನ್ನು ಮತ್ತಷ್ಟು ಮುಂದುವರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಳುಹಿಸಿರುವ ಶಿವಸೇನೆ ನಾಯಕರಾದ ಮಿಲಿಂದ್ ನರ್ವೇಕರ್ ಮತ್ತು ರವೀಂದ್ರ ಫಟಕ್ ಅವರು ನಿನ್ನೆ ಹೋಟೆಲ್ ನಲ್ಲಿ ಬಂಡುಕೋರರೊಂದಿಗೆ ಚರ್ಚೆ ನಡೆಸಿದ್ದರು. ಆದಾಗ್ಯೂ, ಮಾತುಕತೆಗಳು ಯಶಸ್ವಿಯಾಗಲಿಲ್ಲ. ಸೂರತ್ ಮೂಲದ ಸ್ಟಾರ್ ಹೋಟೆಲ್ ನಲ್ಲಿ ಬೀಡುಬಿಟ್ಟಿರುವ ಸೇನಾ ಶಾಸಕರು ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆ ವಿರುದ್ಧ ಅಡ್ಡಮತದಾನಕ್ಕೆ ಸಜ್ಜಾಗುತ್ತಿದ್ದಾರೆ.