ರೈತ ಹೋರಾಟಗಾರರ ಹೆಸರಿನಲ್ಲಿ ಸಂಘಪರಿವಾರದ ನಾಯಕರ ಗಂಭೀರ ಪ್ರಕರಣಗಳನ್ನೂ ವಾಪಾಸ್ ಪಡೆದ ರಾಜ್ಯ ಬಿಜೆಪಿ ಸರ್ಕಾರ !

Prasthutha|

ಡಿಜಿಪಿ, ಐಜಿಪಿ, ಕಾನೂನು ಇಲಾಖೆಗಳ ಸಲಹೆಯನ್ನು ಧಿಕ್ಕರಿಸಿ ಕ್ರಿಮಿನಲ್ ಪ್ರಕರಣಗಳು ವಾಪಾಸ್ !

ಬೆಂಗಳೂರು :ಬಿಜೆಪಿ ಸರ್ಕಾರ ಕನ್ನಡ ಹಾಗೂ ರೈತ ಪರ ಹೋರಾಟಗಾರರ ಕೇಸುಗಳನ್ನು ವಾಪಾಸ್ ಪಡೆಯುವ ನೆಪದಲ್ಲಿ ಸಂಘಪರಿವಾರದ ನಾಯಕರ ಅತಿ ಗಂಭೀರ ಪ್ರಕರಣಗಳನ್ನೂ ವಾಪಾಸ್ ಪಡೆದಿದ್ದು, ಕ್ರಿಮಿನಲ್ ಹಿನ್ನೆಲೆಯ ನಾಯಕರುಗಳನ್ನು ಕಾನೂನು ರೀತ್ಯಾ ಶಿಕ್ಷೆಗೊಳಪಡಿಸುವ ಇಚ್ಚಾಶಕ್ತಿಯೇ ತನಗಿಲ್ಲ ಎಂಬುವುದನ್ನು  ರಾಜ್ಯದ ಜನತೆಗೆ ಮತ್ತೊಮ್ಮೆ  ಸಾರಿದಂತಾಗಿದೆ. ಅಚ್ಚರಿಯ ಸಂಗತಿಯೆಂದರೆ ಸರಕಾರ ವಾಪಾಸ್ ಪಡೆದಿರುವ 62 ಪ್ರಕರಣಗಳಲ್ಲಿ ಒಳಗೊಂಡಿರುವ ಸಂಘಪರಿವಾರದ ನಾಯಕರುಗಳ ಪ್ರಕರಣಗಳು ‘ಅತಿ ಗಂಭೀರ’ ಸ್ವರೂಪದ್ದಾಗಿದ್ದು, ವಾಪಾಸ್ ಪಡೆಯಲು ಅರ್ಹವಾದ ಪ್ರಕರಣಗಳಲ್ಲ ಎಂದು ಡಿಜಿಪಿ, ಐಜಿಪಿ, ರಾಜ್ಯ ಕಾನೂನು ಇಲಾಖೆ ಮತ್ತು ಅಭಿಯೋಗ ಹಾಗೂ ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಡೈರೆಕ್ಟರ್ ಅವರೆಲ್ಲರೂ ಹಿಂಪಡೆಯಬಾರದು ಎಂದು ತಮ್ಮ ಉಲ್ಲೇಖಗಳಲ್ಲಿ ತಿಳಿಸಿದ ಹೊರತಾಗಿಯೂ ಸರ್ಕಾರ ಪ್ರಕರಣಗಳನ್ನು ವಾಪಾಸ್ ಪಡೆದಿದ್ದು ಗಮನಾರ್ಹವಾಗಿದೆ.

- Advertisement -

ಈ ವರ್ಷದ ಮಾರ್ಚ್ ನಲ್ಲಿ ಯಡಿಯೂರಪ್ಪ ಸರ್ಕಾರ, ಸಂಘಪರಿವಾರದವರದ್ದೂ ಸೇರಿದಂತೆ ಒಟ್ಟು 46 ಪ್ರಕರಣಗಳನ್ನು ವಾಪಾಸ್ ಪಡೆದಿದ್ದು, ಅದರಲ್ಲಿ 2017ರ ಪರೇಶ್  ಮೇಸ್ತಾ  ನಿಗೂಢ ಹತ್ಯೆಯ ನೆಪದಲ್ಲಿ ನಡೆದಿದ್ದ ಗಲಭೆಯಲ್ಲಿ ಉತ್ತರ ಕನ್ನಡದ ಐಜಿಪಿಯಾಗಿದ್ದ ಹೇಮಂತ್ ನಿಂಬಾಲ್ಕರ್ ಅವರ ಜೀಪಿಗೆ ಗಲಭೆಕೋರರು ಬೆಂಕಿ ಹಚ್ಚಿದ್ದ ಪ್ರಕರಣವೂ ಸೇರಿತ್ತು. ಇದೀಗ ಆರು ತಿಂಗಳ ನಂತರ ಗಲಭೆ ಪ್ರಕರಣಗಳೂ ಸೇರಿದಂತೆ 62 ಪ್ರಕರಣಗಳನ್ನು ವಾಪಾಸ್ ಪಡೆದಿದ್ದು, ಕ್ರಿಮಿನಲ್ ಗಳಿಗೆ ಪೂರಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ತನ್ನ ನಿಲುವನ್ನು ಮತ್ತೊಮ್ಮೆ ಪ್ರಕಟಪಡಿಸಿರುವ ಬಿಜೆಪಿ ಸರ್ಕಾರ, ಅದನ್ನು ಕಾರ್ಯಗತಗೊಳಿಸಲು ರೈತ ಹಾಗೂ ಕನ್ನಡ ಪರ ಹೋರಾಟಗಾರರ ಪ್ರಕರಣಗಳನ್ನು ಜನರ ಮುಂದಿಟ್ಟಿದೆ.

ಕಳೆದ ಜುಲೈ 22 ರಂದು ನಡೆದಿದ್ದ ಸಂಪುಟ ಉಪಸಮಿತಿ ಸಭೆಯು 62 ಪ್ರಕರಣಗಳನ್ನು ವಾಪಾಸ್ ಪಡೆಯುವುದು ಸೂಕ್ತ ಎಂದು ಸಂಪುಟಕ್ಕೆ ಶಿಫಾರಸ್ಸು ಮಾಡಿತ್ತು. ಅದರಂತೆ ಆಗಸ್ಟ್ 20ರಂದು ನಡೆದಿದ್ದ ಸಂಪುಟ ಸಭೆಯಲ್ಲಿ ಈ ಎಲ್ಲಾ ಪ್ರಕರಣಗಳನ್ನು ವಾಪಾಸ್ ಪಡೆಯುವ ತೀರ್ಮಾನಕ್ಕೆ ಬರಲಾಗಿದೆ. ವಿಪರ್ಯಾಸವೆಂದರೆ ಸಭೆಯ ನಂತರ ಕಾನೂನು ಸಚಿವ ಮಾಧುಸ್ವಾಮಿಯವರಲ್ಲಿ ಸುದ್ದಿಗಾರರು ಕೇಸು ವಾಪಾಸ್ ಪಡೆಯುವ ಕುರಿತಂತೆ ಪ್ರಶ್ನೆಗಳನ್ನು ಕೇಳಿದಾಗ ಅವರು, ನೀವಂದುಕೊಂಡಂತೆ ಈ ಬಾರಿ ವಾಪಾಸ್ ಪಡೆದ ಪ್ರಕರಣಗಳಲ್ಲಿ ಗಲಭೆಯ ಹಾಗೂ ಸಂಘಪರಿವಾರದ ಕೇಸುಗಳು ಒಳಗೊಂಡಿಲ್ಲ ಎಂದಿದ್ದರು. ಆದರೆ ಆ ಹೇಳಿಕೆಗೆ ತದ್ವಿರುದ್ಧವಾಗಿ ಈಗ ಸಂಘಪರಿವಾರದ ನಾಯಕರುಗಳ ಹಲವು ಪ್ರಕರಣಗಳನ್ನು ವಾಪಾಸ್ ಪಡೆಯಲಾಗಿದೆ.

ವಾಪಾಸ್ ಪಡೆದ ಪ್ರಕರಣಗಳು

ಪ್ರತಾಪ್ ಸಿಂಹ ಪ್ರಕರಣ : ಈ ಬಾರಿ ವಾಪಾಸ್ ಪಡೆದಿರುವ ಪ್ರಕರಣಗಳಲ್ಲಿ  ಹುಣಸೂರಿನಲ್ಲಿ 2017ರ ಹನುಮ ಜಯಂತಿಯ ವೇಳೆ ನಿಷೇದಾಜ್ಞೆ ಉಲ್ಲಂಘಿಸಿ ಮೆರವಣಿಗೆ ನಡೆಸಿ, ಬ್ಯಾರಿಕೇಡ್ ಹಾಕಿ ಮೆರವಣಿಗೆ ತಡೆಯಲೆತ್ನಿಸಿದ್ದ ಪೊಲೀಸ್ ಅಧಿಕಾರಿಗಳ ಮೇಲೆಯೇ ಕಾರು ಹತ್ತಿಸುವ ಪ್ರಯತ್ನ ನಡೆಸಿದ್ದ ಸಂಸದ ಪ್ರತಾಪ್ ಸಿಂಹ ಹಾಗೂ ಅವರ ಬೆಂಬಲಿಗರ ಮೇಲಿನ ಕೇಸುಗಳು ಇದರಲ್ಲಿದೆ.

ರೇಣುಕಾಚಾರ್ಯರ ಪ್ರಕರಣ :  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹಾಗೂ ಬೆಂಬಲಿಗರು 2019ರ ಚುನಾವಣ ವಿಜಯೋತ್ಸವದ ನೆಪದಲ್ಲಿ ಕಾಂಗ್ರೆಸ್ ಅಭ್ಯರ್ಥಿಪಿ ಮಂಜಪ್ಪ  ಹಾಗೂ ಅವರ ಬೆಂಬಲಿಗರ ಮೇಲೆ ಹಲ್ಲೆ ನಡೆಸಿ ಚಾಕು ಇರಿದ ಪ್ರಕರಣಗಳನ್ನು ವಾಪಾಸ್ ಪಡೆದಿದ್ದಾರೆ.

ಇತರೆ ಸಚಿವ, ಶಾಸಕ ಬೆಂಬಲಿಗರ ವಿರುದ್ಧದ ಕೇಸ್ ವಾಪಸು: ಸಚಿವ ಬಿ.ಸಿ.ಪಾಟೀಲ್ ಬೆಂಬಲಿಗರ ಮೇಲೆ ಹಾವೇರಿಯ ರಟ್ಟಿಹಳ್ಳಿ ಠಾಣೆಯಲ್ಲಿ ಗಣೇಶ ವಿಸರ್ಜನೆ ವೇಳೆ ದೊಂಬಿ ನಡೆಸಿದ ಹಿನ್ನೆಲೆ ದಾಖಲಾದ ಪ್ರಕರಣ ವಾಪಸ್ ಪಡೆಯಲಾಗಿದೆ. ಸರ್ಕಾರಿ ವಾಹನ ಜಖಂ, ಆಸ್ತಿಪಾಸ್ತಿ ನಾಶ, ಅಧಿಕಾರೊಗಳಿಗೆ ಗಾಯ ಮಾಡಿದ ಗಂಭೀರ ಆರೋಪ ಇತ್ತು. ಪ್ರಕರಣ ವಾಪಸು ಪಡೆಯಲು ಸಚಿವರು ಮನವಿ ಮಾಡಿದ್ದರು.

 ಮೈಸೂರು ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ದಾಂಧಲೆ ನಡೆಸಿ, ಕೋಮು ಗಭೆಗೆ ಪ್ರಚೋದಿಸಿದ ಆರೋಪದಡಿ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳು ವಾಪಸು.

 ಧಾರವಾಡ ಬಿಜೆಪಿ ಶಾಸಕ ಅಮೃತ್ ದೇಸಾಯಿ ಬೆಂಬಲಿಗರಿಂದ 2015ರಲ್ಲಿ ಗಣೇಶ ವಿಸರ್ಜನೆ ವೇಳೆ ಮಸೀದಿಗಳಿಗೆ ಕಲ್ಲು ತೂರಾಟ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ ವಾಪಸ್.

ಹೀಗೆ ರಾಜ್ಯ ಪೊಲೀಸ್ ಇಲಾಖೆ, ಕಾನೂನು ಇಲಾಖೆಗಳ ಸ್ಪಷ್ಟ ನಿರಾಕರಣೆಯ ಹೊರತಾಗಿಯೂ ರಾಜ್ಯ ಬಿಜೆಪಿ ಸರಕಾರ  ಸಂಘಪರಿವಾರದ ನಾಯಕರ ಕ್ರಿಮಿನಲ್ ಪ್ರಕರಣಗಳನ್ನು ವಾಪಾಸ್ ಪಡೆದಿದೆ. ರೈತ ಚಳವಳಿ, ಕನ್ನಡ ಪರ ಚಳವಳಿ, ವಿದ್ಯಾರ್ಥಿ ಚಳವಳಿ, ಮೂಲಭೂತ ಸೌಕರ್ಯಗಳಿಗಾಗಿ ನಡೆದ ಹೋರಾಟಗಳಿಗೆ ಸೀಮಿತವಾಗಬೇಕಿದ್ದ ಕ್ರಿಮಿನಲ್ ಪ್ರಕರಣಗಳನ್ನು ವಾಪಾಸ್ ಪಡೆಯುವ ಪ್ರಕ್ರಿಯೆ, ತಮ್ಮ ಪಕ್ಷದ, ಸಂಘಟನೆಯ ನಾಯಕರ ಹಾಗೂ ಕಾರ್ಯಕರ್ತರನ್ನು ಕಾನೂನಿನ ಶಿಕ್ಷೆಯಿಂದ ರಕ್ಷಿಸುವ ಅನೈತಿಕ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವುದು ಆಡಳಿತ ಯಂತ್ರದ ಸ್ಪಷ್ಟ ದುರುಪಯೋಗವಲ್ಲದೆ ಮತ್ತಿನ್ನೇನಲ್ಲ

- Advertisement -