Home ಟಾಪ್ ಸುದ್ದಿಗಳು ‘ಇಲಾಖೆಯಲ್ಲಿ ನನ್ನ ಬದಲಿಗೆ ನನ್ನ ಮಗ ಅಧಿಕಾರ ಚಲಾಯಿಸಲು ನಾನು ಬಿಡಲ್ಲ : B S...

‘ಇಲಾಖೆಯಲ್ಲಿ ನನ್ನ ಬದಲಿಗೆ ನನ್ನ ಮಗ ಅಧಿಕಾರ ಚಲಾಯಿಸಲು ನಾನು ಬಿಡಲ್ಲ : B S ವಿಜಯೇಂದ್ರರಿಗೆ ಟಾಂಗ್ ಕೊಟ್ಟ ಬಿಜೆಪಿ ಬಂಡಾಯ ಮಂತ್ರಿ ಯೋಗೀಶ್ವರ್

ನಾನು ವೈಯಕ್ತಿಕ ಕಾರ್ಯ ನಿಮಿತ್ತ ದೆಹಲಿಗೆ ಹೋಗಿದ್ದೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ನಾನು ಕಳೆದ 15 ದಿನಗಳ ಹಿಂದೆ ಹಾಗೂ ಒಂದು ವಾರದ ಹಿಂದೆ ದೆಹಲಿಗೆ ಹೋಗಿದ್ದೆ. ಇದಕ್ಕೆ ಇಷ್ಟು ದೊಡ್ಡ ಮಟ್ಟದ ಚರ್ಚೆ ಏಕೆ ಆಗುತ್ತಿದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ವೈಯಕ್ತಿಕವಾಗಿ ನನಗೆ ಕೆಲವು ವಿಷಯಗಳಲ್ಲಿ ನೋವು ಉಂಟಾಗಿದೆ. ಹೀಗಾಗಿ ಪಕ್ಷದ ವರಿಷ್ಠರಿಗೆ ಹೇಳಿಕೊಳ್ಳುವುದು ಅನಿವಾರ್ಯ ಈ ನಿಟ್ಟಿನಲ್ಲಿ ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಕೆಲವು ವಿಷಯಗಳನ್ನು ಚರ್ಚೆ ಮಾಡಿದ್ದೇನೆ.  ಪಕ್ಷ ನನ್ನನ್ನು ವಿಧಾನ ಪರಿಷತ್ ಸದಸ್ಯನಾಗಿ ಮಾಡಿ ಸಚಿವನನ್ನಾಗಿ ಮಾಡಿದೆ. 2023ರ ಚುನಾವಣೆಗೆ ನಾನು ಮತ್ತೆ ಚನ್ನಪಟ್ಟಣ ವಿಧಾನ ಪರಿಷತ್ ಕ್ಷೇತ್ರದಿಂದ ಗೆದ್ದು ಬರಬೇಕು ಇದಕ್ಕೆ ತಕ್ಕ ವಾತಾವರಣವನ್ನು ಪಕ್ಷ ಹಾಗೂ ಸರ್ಕಾರದಲ್ಲಿ ಮೂಡಿಸಬೇಕು. ಪಕ್ಷದ ಚೌಕಟ್ಟಿನಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳ ಗಮನಕ್ಕೂ ಸಹ ತಂದಿದ್ದೇನೆ.

            ನಾನು ವಿಧಾನ ಪರಿಷತ್ ಸದಸ್ಯನಾದ ದಿನವೇ ಹೇಳಿದ್ದೆ ರಾಜ್ಯದಲ್ಲಿ ಶುದ್ಧ ಬಿ.ಜೆ.ಪಿ. ಸರ್ಕಾರವಿಲ್ಲ. 3 ಪಕ್ಷಗಳ ಹೊಂದಾಣಿಕೆ ಸರ್ಕಾರವಿದೆ ಎಂದು ಹೇಳಿದ್ದೆ. ಈಗಲು ಅದನ್ನೇ ಪುನರುಚ್ಚರುಸುತ್ತಿದ್ದೇನೆ. ರಾಜ್ಯದಲ್ಲಿ ಕೇವಲ ಬಿ.ಜೆ.ಪಿ. ಸರ್ಕಾರವಿಲ್ಲ ಕಾಂಗ್ರೆಸ್, ಜೆ.ಡಿ.ಎಸ್. ಹಾಗೂ ಬಿ.ಜೆ.ಪಿ. ರಾಜಕೀಯ ಪಕ್ಷಗಳ ಹೊಂದಾಣಿಕೆ ಸರ್ಕಾರವಿದೆ. ವಿರೋಧ ಪಕ್ಷಗಳ ಜೊತೆ ಬಿ.ಜೆ.ಪಿ. ಸರ್ಕಾರ ಹೊಂದಾಣಿಕೆ ಮಾಡಿಕೊಂಡಿದೆ ಎಂದರು. ನನಗೆ ಉತ್ತಮ ಖಾತೆ ನೀಡಿಲ್ಲವೆಂದಾಗಲಿ ಅಥವಾ ರಾಮನಗರ ಜಿಲ್ಲೆ ಉಸ್ತುವಾರಿ ನೀಡಿಲ್ಲವೆಂದು ಬೇಸರವಿಲ್ಲ. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಬಿ.ಜೆ.ಪಿ. ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೇನೆ. ನನಗೆ ನನ್ನದೇ ಆದ ಕೆಲವು ಚಿಂತನೆಗಳಿವೆ. ಹಳೇ ಮೈಸೂರು ಭಾಗದಲ್ಲಿ ಬಿ.ಜೆ.ಪಿ. ಬಲಿಷ್ಠವಾಗಬೇಕು. ಈ ನಿಟ್ಟಿನಲ್ಲಿ ಕೆಲವು ವಿಷಯಗಳನ್ನು ಪಕ್ಷದ ವರಿಷ್ಠರ ಜೊತೆ ಮಾತನಾಡಿದ್ದೇನೆ. ನಮ್ಮ ಎದುರಾಳಿ ಪಕ್ಷಗಳ ಜೊತೆ ನಮ್ಮ ಪಕ್ಷದವರು ಹಾಗೂ ಸರ್ಕಾರ ಹೊಂದಾಣಿಕೆ ಮಾಡಿಕೊಂಡಿದ್ದು, ವೈಯಕ್ತಿಕವಾಗಿ ನನಗೆ ತುಂಬಾ ನೋವಾಗಿದೆ. ಮುಂಬರುವ ಚುನಾವಣೆಯಲ್ಲಿ ನಾನು ಗೆಲ್ಲಬೇಕು. ಹೀಗಾಗಿ, ನನ್ನ ದುಃಖವನ್ನು ತೋಡಿಕೊಂಡಿರುವುದಾಗಿ ಹೇಳಿದ್ದಾರೆ.

            ಜೂನ್ ಮೊದಲ ವಾರದಲ್ಲಿ ಬಿ.ಜೆ.ಪಿ. ಶಾಸಕಾಂಗ ಪಕ್ಷದ ಸಭೆ ಕರೆಯಲು ಶಾಸಕರು  ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಬಿ.ಜೆ.ಪಿ. ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ.         ನಾನು ಈಗ ಮಂತ್ರಿಯಾಗಿದ್ದೇನೆ. ನನ್ನ ಇಲಾಖೆಯಲ್ಲಿ ನನ್ನ ಮಗನನ್ನ ಅಧಿಕಾರ ಚಲಾಯಿಸಲು ನಾನು ಬಿಡುವುದಿಲ್ಲ. ಅದೇ ರೀತಿ ಮುಖ್ಯಮಂತ್ರಿಗಳ ಹೆಸರಿನಲ್ಲಿ ಬೇರೆಯವರು ಅಧಿಕಾರ ಚಲಾಯಿಸಬಾರದು ಎಂದು ವಿಜಯೇಂದ್ರ ಅವರ ಹೆಸರನ್ನು ಹೇಳದೆ ಪರೋಕ್ಷವಾಗಿ ಕೆಂಡ ಕಾರಿದರು. ಮುಖ್ಯಮಂತ್ರಿಗಳ ಹೆಸರಿನಲ್ಲಿ ಮತ್ತೊಬ್ಬರು ಅಧಿಕಾರವನ್ನು ಚಲಾಯಿಸುವುದನ್ನು ಸಹಿಸುವ ಪ್ರಶ್ನೆ ಇಲ್ಲ ಎಂದಿದ್ದಾರೆ.

            ರಾಜ್ಯದಲ್ಲಿ ಕೋವಿಡ್ ನಿಂದ ಜನರು ಪರಿತಪಿಸುತ್ತಿದ್ದಾರೆ. ಕೊರೋನಾ ನಿವಾರಣೆ ರಾಜ್ಯ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು ಎಂದರು. ನಾಯಕತ್ವ ಬದಲಾವಣೆ ಮಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅಷ್ಟೂ ಶಕ್ತಿಯೂ ನನಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.     ಒಂದು ವೇಳೆ ಹೈಕಮಂಡ್ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಬದಲಾಯಿಸಿದರೆ ಅದಕ್ಕೆ ನಿಮ್ಮ ಬೆಂಬಲ ಇರುತ್ತದೆಯೇ ಎಂಬ ಪ್ರಶ್ನೆಗೆ ಆ ಸಂದರ್ಭ ಬಂದಾಗ ನೋಡೋಣ ಎಂದು ಮಾರ್ಮಿಕವಾಗಿ ಉತ್ತರಿಸಿದರು.

            ಬಿ.ಜೆ.ಪಿ. ಶಾಸಕರಾದ ರೇಣುಕಾಚಾರ್ಯ ಸೇರಿದಂತೆ ಕೆಲವು ಶಾಸಕರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರೆಲ್ಲರಿಗೂ ಉತ್ತರ ಕೊಡುತ್ತೇನೆ. ಎಲ್ಲ ವಿಷಯಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಕೆಲವು ವಿಷಯಗಳನ್ನು ಪಕ್ಷದ ಚೌಕಟ್ಟಿನೊಳಗೆ ನಾಲ್ಕು ಗೋಡೆಗಳ ಮದ್ಯೆ ಹಂಚಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪಕ್ಷದ ಪ್ರಮುಖರ ಮುಂದೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದೇನೆ.

Join Whatsapp
Exit mobile version