ಲಕ್ಷದ್ವೀಪ : ಇತ್ತೀಚೆಗೆ ನೇಮಕಗೊಂಡ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಜಾರಿಗೊಳಿಸಿರುವ ವಿವಾದಾತ್ಮಕ ಕಾನೂನುಗಳ ವಿರುದ್ಧ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದರ ಬೆನ್ನಲ್ಲೇ ಬಿಜೆಪಿ ಅಧ್ಯಕ್ಷ ಮುಹಮ್ಮದ್ ಕಾಸಿಂ ಕೂಡ ಹೊಸ ನಿಯಮಗಳ ವಿರುದ್ಧ ಕಿಡಿ ಕಾರಿದ್ದಾರೆ. ಎಲ್ಲ ಜನರ ವಿಶ್ವಾಸವನ್ನು ಪಡೆದು ನಿಯಮಾವಳಿಗಳನ್ನು ಬದಲಾವಣೆಗೊಳಿಸಬೇಕು ಎಂದವರು ಹೇಳಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾರಿಗೂ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.
ದಿನೇಶ್ವರ್ ಶರ್ಮ ನಿಧನದ ನಂತರ ತೆರವಾದ ಆಡಳಿತಾಧಿಕಾರಿ ಜವಬ್ದಾರಿಯನ್ನು ಕಳೆದ ಡಿಸೆಂಬರಿನಲ್ಲಿ ಪ್ರಫುಲ್ ಖೋಡಾ ಅವರಿಗೆ ವಹಿಸಲಾಗಿತ್ತು. ನಗರ್ ಹವೇಲಿ ಮತ್ತು ದಾದ್ರಾದ ಆಡಳಿತಾಧಿಕಾರಿಯಾಗಿದ್ದ ಖೋಡಾರಿಗೆ ಲಕ್ಷದ್ವೀಪದ ಜವಾಬ್ದಾರಿಯನ್ನು ಕೂಡಾ ನೀಡಲಾಗಿತ್ತು. ಖೋಡಾರ ವಿವಾದಾತ್ಮಕ ನಿಯಮಾವಳಿಗಳ ವಿರುದ್ದ ಕಿಡಿಕಾರಿರುವ ಕಾಂಗ್ರೆಸ್ ಜಾರಿಗೊಳಿಸಿರುವ ಕಾನೂನನ್ನು ವಾಪಸ್ ಪಡೆದು, ಖೋಡಾರನ್ನು ವಾಪಸ್ ಕರೆಸಬೇಕು ಎಂದು ಆಗ್ರಹಿಸಿದೆ.
ಶಾಲೆಗಳಲ್ಲಿ ಮದ್ಯಾಹ್ನದ ಊಟದ ಪಟ್ಟಿಯಿಂದ ಬೀಫ್ ಕೈಬಿಟ್ಟಿರುವುದು, ಖಾಸಗಿ ಆಸ್ತಿಗಳನ್ನು ಅಭಿವೃದ್ಧಿಗಾಗಿ ಕಡ್ಡಾಯವಾಗಿ ಸ್ವಾಧೀನಗೊಳಿಸುವುದು, ಯಾರನ್ನು ಬೇಕಾದರೂ ಬಂಧಿಸಲು ಪೋಲಿಸರಿಗೆ ಅಧಿಕಾರ ನೀಡುವ ನಿಯಮಗಳನ್ನು ಜಾರಿಗೊಳಿಸುವುದು, ಸ್ಥಳೀಯ ಚುನಾವಣೆಗೆ ಸ್ಪರ್ಧಿಸುವವರಿಗೆ ಎರಡು ಮಕ್ಕಳ ನೀತಿಯನ್ನು ಅನ್ವಯಿಸುವ ಕ್ರಮ ಹಾಗೂ ರಸ್ತೆಗಳನ್ನು ಅಗಲೀಕರಿಸಲು ಮರಗಳನ್ನು ಕಡಿಯಲು ಅನುಮತಿಸಿರುವುದು ಮುಂತಾದ ಕ್ರಮಗಳನ್ನು ಯಾವುದೇ ಚರ್ಚೆಗೆ ಒಳಪಡಿಸದೆ ಪ್ರಫುಲ್ ಖೋಡಾ ದಿಢೀರನೇ ಜಾರಿಗೊಳಿಸಿ ಅಲ್ಲಿನ ನಿವಾಸಿಗಳ ಕೆಂಗೆಣ್ಣಿಗೆ ಗುರಿಯಾಗಿದ್ದರು. ಇದೀಗ ಕಾಂಗ್ರೆಸ್, ಮುಸ್ಲಿಂ ಲೀಗ್, ಸಿಪಿಐ ನಾಯಕರ ಜೊತೆ ಬಿಜೆಪಿ ನಾಯಕರೂ ಕೂಡಾ ವಿರೋಧಿಸಲು ದನಿಗೂಡಿಸಿದ್ದಾರೆ. ಶೇಕಡವಾರು 95 ರಷ್ಟು ಮುಸ್ಲಿಮರೇ ಹೊಂದಿರುವ ಲಕ್ಷದ್ವೀಪವನ್ನು ಕೇಸರಿಮಯಗೊಳಿಸಿ ಅಧಿಕಾರ ಹಿಡಿಯುವ ಬಿಜೆಪಿಯ ತಂತ್ರವಿದು ಎಂದು ಮುಸ್ಲಿಂ ಲೀಗ್ ಹಾಗೂ ಸಿಪಿಎಂ ಆರೋಪಿಸಿದೆ.