ಬಂಗಾಳದಲ್ಲೂ ಬಿಜೆಪಿಯಿಂದ ಕೋಮುವಾದದ ಮೇಲೆ ಮತ ಪಡೆಯುವ ಹುನ್ನಾರ

Prasthutha|

►‘ಇಸ್ಲಾಮಿಸ್ಟ್ ಹಾಗೂ ನಕ್ಸಲ್ ‘ಗಳ ಹಾವಳಿ ಹೆಚ್ಚಾಗಿದೆ ಎಂದ ಬಿಜೆಪಿ ಅಧ್ಯಕ್ಷ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ 2021ರ ವಿಧಾನ ಸಭಾ ಚುನಾವಣೆಯು ಹತ್ತಿರವಾಗುತ್ತಿದೆ.  ಇತರೆಡೆಗಳಲ್ಲಿ ಧರ್ಮ ಹಾಗೂ ಕೋಮುವಾದದ ಮೇಲೆ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಮತ ಪಡೆದು ಗೆದ್ದಿರುವುದರಿಂದ ಪ್ರೇರಿತಗೊಂಡಿರುವ ಬಿಜೆಪಿ, ಪಶ್ಚಿಮ ಬಂಗಾಳದಲ್ಲೂ ಅದೇ ಕುತಂತ್ರವನ್ನು ಮುಂದುವರೆಸುವ ಹುನ್ನಾರದಲ್ಲಿದ್ದಂತಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಕೇಂದ್ರ ಗೃಹ ಸಚಿವ ಅಮಿತ್‌ ಶಾರವರಿಗೆ ಪತ್ರವನ್ನು ಬರೆದಿದ್ದು, ರಾಜ್ಯದಲ್ಲಿನ ‘ವಿಷಮ’ ಪರಿಸ್ಥಿತಿಯಲ್ಲಿ ಮಧ್ಯಪ್ರವೇಶಿಬೇಕೆಂದು ಆಗ್ರಹಿಸಿದ್ದಾರೆ.

- Advertisement -

ಅಲ್ ಕಾಯಿದಾ‌ದ ಸದಸ್ಯರು ಎಂದು ಆರೋಪಿಸಲ್ಪಟ್ಟ ಆರು ಮಂದಿಯನ್ನು ಇತ್ತೀಚೆಗೆ ಬಂಧಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ “ಕಾನೂನು ಸುವ್ಯವಸ್ಥೆ ಪುನಃಸ್ಥಾಪಿಸಲು” ರಾಜ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರವರ ತುರ್ತು ಹಸ್ತಕ್ಷೇಪ ನಡೆಸಬೇಕೆಂದು ಕೋರಿ ಘೋಷ್ ಪತ್ರ ಬರೆದಲ್ಲಿ ಆಗ್ರಹಿಸಿದ್ದಾರೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಅನುಸರಿಸುತ್ತಿರುವ ನೀತಿಗಳು “ಪಶ್ಚಿಮ ಬಂಗಾಳವನ್ನು ಭಯೋತ್ಪಾದನೆಗೆ ಕೇಂದ್ರವನ್ನಾಗಿ ಮಾಡಿದೆ” ಎಂದು ಅವರು ಪತ್ರದಲ್ಲಿ ಆರೋಪಿಸಿದ್ದಾರೆ.

ಇದಲ್ಲದೇ, ರಾಜ್ಯದಲ್ಲಿ ಹೆಚ್ಚುತ್ತಿರುವ ನಕ್ಸಲರ ಹಾವಳಿ, ಪೊಲೀಸರ ಕ್ರೌರ್ಯ, ಬಿಜೆಪಿ ನಾಯಕರ ಹತ್ಯೆ ಹಲ್ಲೆ ಸೇರಿದಂತೆ ಹಲವು ವಿಷಯಗಳನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಘೋಷ್ ಬರೆದಿರುವ ಪತ್ರವು ರಾಜ್ಯದ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ, ಪಶ್ಚಿಮ ಬಂಗಾಳವನ್ನು ಆದ್ಯತೆಯನ್ನಾಗಿ ಮಾಡಿಕೊಂಡಿದೆ ಎಂಬುದನ್ನು ಸೂಚಿಸುತ್ತಿದೆ. ಮುಂಬರುವ ಚುನಾವಣೆಗಳತ್ತ ಗಮನ ಹರಿಸಲು ಸಮಗ್ರ ಪ್ರಯತ್ನಗಳನ್ನು ಪಕ್ಷವು ನಡೆಸುತ್ತಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿ ಬಿಜೆಪಿ ಕಾರ್ಯೋನ್ಮುಖವಾಗಿದೆ ಎನ್ನಲಾಗುತ್ತಿದೆ.

2019 ರಲ್ಲಿ ರಾಜ್ಯದ 42 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಮಾತ್ರ ಪಡೆಯುವಲ್ಲಿ ಸಫಲವಾಗಿದೆ. ಆದರೆ ರಾಜ್ಯದಲ್ಲಿ ನಡೆಯಲಿರುವ 2021 ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಬಿಜೆಪಿ ಯಾವ ತಂತ್ರಗಳನ್ನು ರೂಪಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

- Advertisement -