ದೇಶದಲ್ಲಿ ಕೋವಿಡ್ ಸೋಂಕು ಮಹಾಮಾರಿಯಂತೆ ವ್ಯಾಪಕವಾಗಿ ಹರಡಿ ಲಕ್ಷಾಂತರ ಜನರ ಜೀವವನ್ನು ಬಲಿ ತೆಗೆದುಕೊಂಡು ಇತ್ತೀಚೆಗೆ ಗಂಗಾ ನದಿಯಲ್ಲಿ ಲೆಕ್ಕವಿಲ್ಲದಷ್ಟು ಮೃತ ದೇಹಗಳು ಹರಿದು ಬಂದಿರುವ ವರದಿಗಳ ಹೊರತಾಗಿಯೂ, ಉತ್ತರ ಪ್ರದೇಶದಲ್ಲಿ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಸರಿಸಾಟಿಯಿಲ್ಲದ ಪ್ರಯತ್ನ ಮಾಡಿದ್ದಾರೆ ಎಂದು ಆದಿತ್ಯನಾಥ್ ಸರ್ಕಾರವನ್ನು ಬಿಜೆಪಿಯ ಕೊರೊನಾ ಪರಿಶೀಲನಾ ಸಮಿತಿ ಶ್ಲಾಘಿಸಿದೆ.
ಆಮ್ಲಜನಕ ಸೌಲಭ್ಯಗಳ ಕೊರತೆಯಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾದ ರಾಜ್ಯದಲ್ಲಿ, ಸರ್ಕಾರದ ಕೊರೊನಾ ನಿರ್ವಹಣೆಯ ವಿರುದ್ಧವಾಗಿ ಸ್ವತಃ ಬಿಜೆಪಿಗರೆ ಆಕ್ರೋಶ ವ್ಯಕ್ತಪಡಿಸಿರುವ ಮಧ್ಯೆ ಈ ಕ್ಲೀನ್-ಚಿಟ್ ವರದಿ ಹೊರಬಿದ್ದಿದೆ.
ರಾಜ್ಯದಲ್ಲಿ ಆದಿತ್ಯನಾಥ್ ಕೊರೊನಾ ನಿರ್ವಹಣೆಯನ್ನು ಪರಿಶೀಲಿಸುವ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುವ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ಸರ್ಕಾರದ ಸಚಿವರೊಂದಿಗೆ ಎರಡು ದಿನಗಳ ಕಾಲ ಸರಣಿ ಸಭೆ ನಡೆಸಿದ ನಂತರ ಈ ವರದಿ ಹೊರಬಿದ್ದಿದೆ.
ರಾಜ್ಯದ ಅನೇಕ ಬಿಜೆಪಿ ನಾಯಕರು ಸಾರ್ವಜನಿಕವಾಗಿ ರಾಜ್ಯ ಸರ್ಕಾರದ ಕೊರೊನಾ ನಿರ್ವಹಣೆಯನ್ನು ಟೀಕಿಸಿದ್ದರು. ನಾಯಕತ್ವದ ಈ ಬೇಜವಾಬ್ದಾರಿತನದಿಂದ ಇತ್ತೀಚಿಗೆ ರಾಜ್ಯದಲ್ಲಿ ನಡೆದ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷವು ನಿರೀಕ್ಷೆಗಿಂತ ಹೆಚ್ಚು ವೈಫಲ್ಯ ಸಾಧಿಸಿದೆ ಎಂದು ಅವರು ಗಮನಸೆಳೆದಿದ್ದರು.
ರಾಷ್ಟ್ರೀಯ ನಾಯಕತ್ವದ ಸಭೆಗಳ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಸಿಂಗ್, “ಇತರ ರಾಜ್ಯಗಳಿಗೆ ಹೋಲಿಸಿದರೆ ಉತ್ತಮವಾಗಿ ಕೊರೊನಾ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. ಮುಖ್ಯಮಂತ್ರಿ ಆದಿತ್ಯನಾಥ್ ಅವರ ಪ್ರಯತ್ನಗಳನ್ನು ಸಭೆಗಳು ಪರಿಶೀಲಿಸಿದವು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಈಗಿನ ನಾಯಕತ್ವವನ್ನು ಬದಲಿಸುವ ಯಾವುದೇ ಆಲೋಚನೆಯನ್ನು ಮೋಹನ್ ಸಿಂಗ್ ತಳ್ಳಿಹಾಕಿದ್ದಾರೆ.