ಮಂಡ್ಯ: ಬಿಜೆಪಿ ಸಂಸದರು ರಾಜ್ಯದ ಜನರಿಗೆ ಗುಲಾಮರಾಗಿರಬೇಕೇ ಹೊರತು ಕೇಂದ್ರ ಸರ್ಕಾರಕ್ಕಲ್ಲ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಶನಿವಾರ ವಾಗ್ದಾಳಿ ನಡೆಸಿದರು.
ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ಎಎಪಿ ಮಂಡ್ಯದಲ್ಲಿ ಇಂದು ಪ್ರತಿಭಟನೆ ನಡೆಸಿದವು. ಪ್ರತಿಭಟನೆಯಲ್ಲಿ ಎಎಪಿ ಮುಖಂಡರು ಸೇರಿದಂತೆ ಎಎಪಿಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಾಲಾ ಸ್ವಾಮಿ, ರಾಜ್ಯ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ದರ್ಶನ್ ಜೈನ್ ಸೇರಿದಂತೆ ಅನೇಕ ಪಕ್ಷದ ಮುಖಂಡರುಗಳು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಸಮಸ್ಯೆ ಉಲ್ಬಣಕ್ಕೆ ಕೇಂದ್ರ ಸರ್ಕಾರವು ಕಾರಣ. ಈ ವಿಚಾರದಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರೇ ನೇರ ಹೊಣೆ. ಕಾವೇರಿ ವಿಚಾರದಲ್ಲಿ ಹೋರಾಟಗಳು ನಡೆಯುತ್ತಿದ್ದರೂ, ಸಂಸದರು ಏನನ್ನೂ ಮಾತನಾಡುತ್ತಿಲ್ಲ. ರಾಜ್ಯದ ಜನರಿಗೆ ಗುಲಾಮರಾಗಬೇಕಿದ್ದ ಬಿಜೆಪಿ ಸಂಸದರೆಲ್ಲ ಕೇಂದ್ರ ಸರ್ಕಾರದ ಗುಲಾಮರಾಗಿದ್ದಾರೆ. ಬಿಜೆಪಿಯಿಂದ ಮತ್ತೆ ಸಂಸದರಾಗಬೇಕು ಎನ್ನುವ ಯತ್ನದಲ್ಲಿ ನೀರಿಗಾಗಿ ನಡೆಯುತ್ತಿರುವ ಹೋರಾಟವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.
ಸ್ವಾತಂತ್ರ್ಯದ ಪೂರ್ವದಿಂದ ಈ ಸಮಸ್ಯೆ ಅಸ್ತಿತ್ವದಲ್ಲಿದೆ. ಸ್ವಾತಂತ್ರ್ಯಾ ಬಂದ ಎಲ್ಲಾ ಸರ್ಕಾರಗಳು ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಎಡವಿವೆ. ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದ್ದು, ರಾಜ್ಯಕ್ಕೆ ಅನ್ಯಾಯ ಎಸಗಿವೆ. ರಾಜಕೀಯ ಲಾಭಕ್ಕಾಗಿ ಕೆಲಸ ಮಾಡಿವೆ ಹೊರತು ಸಮಸ್ಯೆಯ ಪರಿಹಾರಕ್ಕೆ ಯಾವೊಂದು ಸರ್ಕಾರವು ಪ್ರಯತ್ನಿಸಿಲ್ಲ. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಈ ನಿಟ್ಟಿನಲ್ಲಿ ಹೋರಾಟ ಆರಂಭಿಸಿದೆ ಎಂದು ತಿಳಿಸಿದರು.
ನಮ್ಮಲ್ಲಿ ನೀರಿನ ಕೊರತೆ ಎದುರಾಗಿರುವಾಗ, ಬೇರೆಯವರಿಗೆ ನೀರನ್ನು ಒದಗಿಸಲೇ ಬೇಕು ಎನ್ನುವ ಕಾನೂನು ಎಷ್ಟು ಸರಿ. ರಾಜ್ಯದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ನೀರು ಬಿಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ನೀರನ್ನು ನೀಡಲು ಹೇಗೆ ಸಾಧ್ಯ. ತಮಿಳುನಾಡಿನವರು ನೀರು ಅಥವಾ ಗಡಿ ವಿಚಾರದಲ್ಲಿ ಮೊದಲೇ ಎಚ್ಚೆತ್ತುಕೊಳ್ಳುತ್ತಾರೆ. ಆದರೆ, ನಮ್ಮಲ್ಲಿ ಆ ಪರಿಸ್ಥಿತಿಯಿಲ್ಲ. ತಮಿಳುನಾಡು ಸರ್ಕಾರವೇ ಮೊದಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಳಿಕವೂ ಸಮರ್ಪಕ ವಾದ ಮಂಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತ ನಡೆಸಿರುವ ರಾಷ್ಟ್ರೀಯ ಪಕ್ಷಗಳು ಕಾವೇರಿ ನದಿ ನೀರು ಹಂಚಿಕೆ, ಮೇಕೆದಾಟು ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಎಸಗಿವೆ. ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ನೂರಾರು ಕೋಟಿ ಖರ್ಚು ಮಾಡಿ ಖಾತರಿ ಯೋಜನೆಯ ಉದ್ಘಾಟನೆ ಮಾಡುತ್ತಾರೆ. ಆದರೆ, ನೀರಿನ ವಿಚಾರದಲ್ಲಿ ನ್ಯಾಯಾಲಯಕ್ಕೆ ವಸ್ತುಸ್ಥಿತಿಯನ್ನು ವಿವರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದರು.
ನಂತರ ರೈತ ಸಂಘದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ಬೆಂಬಲ ಸೂಚಿಸಿದರು.
ಬೆಳಗ್ಗೆ ಮಂಡ್ಯ ಜಿಲ್ಲೆ ಹಿತರಕ್ಷಣಾ ವೇದಿಕೆಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು, ರೈತ ನಾಯಕಿ ಸುನಂದಾ ಜಯರಾಮ್, ಮಾಜಿ ಸಚಿವ ಡಿಸಿ ತಮ್ಮಣ್ಣ, ಡಾ. ಕೆ ಅನ್ನದಾನಿ, ಮಾಜಿ ಶಾಸಕ ಆತ್ಮಾನಂದ, ಸ್ವಾಮಿಗೌಡ ಸೇರಿದಂತೆ ಇನ್ನಿತರರು ಇದ್ದರು.