ಪಶ್ಚಿಮ ಬಂಗಾಳ | ‘ಪಕ್ಷಾಂತರ ಪರ್ವ’ದ ನಡುವೆ ಬಿಜೆಪಿ ಸಂಸದನ ಪತ್ನಿ ಟಿಎಂಸಿ ಸೇರ್ಪಡೆ; ಮಮತಾ ಬ್ಯಾನರ್ಜಿಗೆ ಆನೆಬಲ

Prasthutha|

ಕೊಲ್ಕತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಿರುವ ನಡುವೆ, ಸಿಎಂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಮುಖಂಡರನ್ನು ಪಕ್ಷ ಬಿಡಿಸಿ ತಮ್ಮ ಪಕ್ಷಕ್ಕೆ ಸೇರ್ಪಡೆಗೊಳಿಸುತ್ತಿದ್ದ ಬಿಜೆಪಿಗರಿಗೆ ದೊಡ್ಡ ಆಘಾತಕಾರಿ ಸುದ್ದಿಯೊಂದು ಬಂದಿದೆ. ಶಾಸಕರು ಸೇರಿದಂತೆ ಹಲವು ಪ್ರಮುಖರು ಪಕ್ಷ ತೊರೆದು ಬಿಜೆಪಿ ಸೇರುತ್ತಿರುವ ನಡುವೆ, ಬಿಜೆಪಿ ಸಂಸದರೊಬ್ಬರ ಪತ್ನಿ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ.

ಪಶ್ಚಿಮ ಬಂಗಾಳದ ಬಿಷ್ಣುಪುರ ಸಂಸದ ಸೌಮಿತ್ರಾ ಖಾನ್ ಅವರ ಪತ್ನಿ ಸುಜಾತಾ ಮೊಂಡಲ್ ಟಿಎಂಸಿ ಸೇರ್ಪಡೆಗೊಂಡಿದ್ದಾರೆ. ಸೌಮಿತ್ರಾ ಖಾನ್ ಅವರ ವಿಜಯದಲ್ಲಿ ಸುಮಿತ್ರಾ ಮೊಂಡಲ್ ಪ್ರಮುಖ ಪಾತ್ರವಹಿಸಿದ್ದರು. 2014ರಲ್ಲಿ ಸೌಮಿತ್ರಾ ಖಾನ್ ಬಿಷ್ಣುಪುರದಲ್ಲಿ ವಿಜಯಿಯಾಗಿದ್ದರು.

- Advertisement -

2019ರ ಲೋಕಸಭಾ ಚುನಾವಣೆಯಲ್ಲಿ ಕ್ರಿಮಿನಲ್ ಕೇಸ್ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರ ಬಿಷ್ಣುಪುರ ಪ್ರವೇಶಕ್ಕೆ ಸೌಮಿತ್ರ ಖಾನ್ ಗೆ ಕೋರ್ಟ್ ನಿಷೇಧ ಹೇರಿದ್ದ ಹಿನ್ನೆಲೆಯಲ್ಲಿ ಸುಜಾತಾ ಮೊಂಡಲ್ ಏಕಾಂಗಿಯಾಗಿ ನಿಂತು ಚುನಾವಣಾ ಪ್ರಚಾರ ನಿರ್ವಹಿಸಿದ್ದರು.

ಸುಜಾತಾ ಬಿಜೆಪಿ ನಾಯಕಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೂ ಈ ಹಿಂದೆ ವೇದಿಕೆ ಹಂಚಿಕೊಳ್ಳುವಷ್ಟು ಪ್ರಭಾವಿಯಾಗಿದ್ದಾರೆ.

ಚುನಾವಣೆಗೆ ಕೇವಲ ನಾಲ್ಕು ತಿಂಗಳು ಬಾಕಿಯಿರುವಾಗ, ಬಿಜೆಪಿಯ ಪಕ್ಷಾಂತರ ಪರ್ವದಿಂದ ಬಳಲಿದ್ದ ಟಿಎಂಸಿಗೆ ಸುಜಾತಾ ಮೊಂಡಲ್ ಬಿಜೆಪಿ ತೊರೆದು, ಟಿಎಂಸಿ ಸೇರ್ಪಡೆಗೊಂಡಿರುವುದು ದೊಡ್ಡ ಬಲವನ್ನು ತಂದುಕೊಟ್ಟಂತಾಗಿದೆ.    

- Advertisement -