ಮಂಗಳೂರು: ಸುರತ್ಕಲ್ ನಲ್ಲಿ ಇತ್ತೀಚೆಗೆ ನಡೆದಿದ್ದ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧದ ಅನೈತಿಕ ಪೋಲಿಸ್ ಗಿರಿ ಪ್ರಕರಣದಲ್ಲಿ ಪ್ರಮುಖ ರೂವಾರಿ ಪ್ರೀತಂ ಶೆಟ್ಟಿ ಎಂಬಾತ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಜೊತೆಯಲ್ಲಿ ಬಸ್ ಸ್ಟ್ಯಾಂಡ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಜವಾಬ್ದಾರಿಯುತ ಶಾಸಕರೋರ್ವರು ರೌಡಿಗಳ ಜೊತೆ ವೇದಿಕೆ ಹಂಚಿಕೊಂಡಿರುವ ಘಟನೆಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೂಂಡಾಗಿರಿ ಮತ್ತು ಅಪರಾಧ ಹಿನ್ನೆಲೆಯವರೊಂದಿಗೆ ಜಿಲ್ಲೆಯ ಪ್ರತಿನಿಧಿಗಳು ಹೊಂದಿರುವ ಮನಸ್ಥಿತಿಯೇ ಜಿಲ್ಲೆಯಲ್ಲಿ ಅನೈತಿಕ ಪೋಲೀಸ್ ಗಿರಿ ಪುನರಾವರ್ತನೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಈ ಹಿಂದೆ ಸುರತ್ಕಲ್ ನ ಶುಭಗಿರಿ ಬಳಿ ಬಸ್ ತಡೆದು ಭಿನ್ನಕೋಮಿನ ವಿದ್ಯಾರ್ಥಿಗಳ ಮೇಲೆ ನಡೆದಿದ್ದ ಹಲ್ಲೆಯಲ್ಲೂ ಇದೇ ರೌಡಿ ಪ್ರೀತಂ ಶೆಟ್ಟಿ ನೇತೃತ್ವ ವಹಿಸಿದ್ದ. ಆವತ್ತಿನ ಘಟನೆಯಲ್ಲಿ ಕೂಡಾ ಪ್ರಕರಣ ದಾಖಲಾಗದಂತೆ ಯುವಕ – ಯುವತಿಗೆ ಈತ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಮಾತ್ರವಲ್ಲದೇ ಕೊಟ್ಟಾರ ಬಳಿ ಜೋಕಟ್ಟೆಯ ಯುವಕನೋರ್ವನಿಗೆ ಕಟ್ಟಿಹಾಕಿ ಥಳಿಸಿದ ಪ್ರಕರಣದಲ್ಲೂ ಈತ ಪ್ರಮುಖ ಆರೋಪಿ ಎನ್ನಲಾಗಿದ್ದು, ಸ್ಥಳೀಯ ಬಜರಂಗದಳದ ಪ್ರಮುಖನೂ ಆಗಿದ್ದಾನೆ. ಈತನ ಎಲ್ಲಾ ಸಮಾಜ ವಿರೋಧಿ ಚಟುವಟಿಕೆಗಳಿಗೆ ಶಾಸಕ ಭರತ್ ಶೆಟ್ಟಿಯವರ ಕೃಪಕಟಾಕ್ಷವಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಜನಪ್ರತಿಗಳಾದವರಿಗೆ ಸಮಾಜದಲ್ಲಿ ಗೌರವವಿರುತ್ತದೆ. ಆದರೆ ಅಪರಾಧ ಹಿನ್ನೆಲೆಯವರನ್ನು ತಮ್ಮ ಪಟಾಲಂ ಗ್ರೂಪ್ ನಲ್ಲಿ ಸೇರಿಸಿಕೊಂಡು ಇವರು ಸಮಾಜಕ್ಕೆ ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂದು ಸಾರ್ವಜನಿಕರೊಬ್ಬರು ಪ್ರಶ್ನಿಸಿದ್ದಾರೆ.
ಕಾಟಿಪಳ್ಳ ಕೃಷ್ಣಾಪುರದಲ್ಲಿ ದೀಪಕ್ ರಾವ್ ಹೆಸರಿನಲ್ಲಿ ಬಸ್ ನಿಲ್ದಾಣವೊಂದನ್ನು ನಿರ್ಮಿಸಲಾಗಿದ್ದು, ಇದರ ಉದ್ಘಾಟನೆ ಶನಿವಾರ ನೆರವೇರಿದೆ. ಸಮಾರಂಭದಲ್ಲಿ ಶಾಸಕ ಭರತ್ ಶೆಟ್ಟಿ ಕೂಡ ಪಾಲ್ಗೊಂಡಿದ್ದು, ಅಪರಾಧ ಹಿನ್ನೆಲೆಯ ಹಾಗೂ ಇತ್ತೀಚೆಗೆ ದ.ಕ.ಜಿಲ್ಲೆಗೆ ಕೆಟ್ಟ ಹೆಸರು ತಂದ ಸುರತ್ಕಲ್ ಅನೈತಿಕ ಪೊಲೀಸ್ ಗಿರಿ ಪ್ರಕರಣದ ರೂವಾರಿ ಹಾಗೂ ಪ್ರಮುಖ ಆರೋಪಿ ಪ್ರೀತಂ ಶೆಟ್ಟಿ ಜೊತೆ ಶಾಸಕರು ವೇದಿಕೆ ಹಂಚಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.