Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ಗ್ಯಾರಂಟಿಗಳನ್ನು ಈಡೇರಿಸ್ತಾರೆ, ನುಡಿದಂತೆ ನಡೆಯುತ್ತಾರೆ: ಎಸ್‌ಟಿ ಸೋಮಶೇಖರ್

ಸಿದ್ದರಾಮಯ್ಯ ಗ್ಯಾರಂಟಿಗಳನ್ನು ಈಡೇರಿಸ್ತಾರೆ, ನುಡಿದಂತೆ ನಡೆಯುತ್ತಾರೆ: ಎಸ್‌ಟಿ ಸೋಮಶೇಖರ್

ಬೆಂಗಳೂರು: ಸಿದ್ದರಾಮಯ್ಯ, ಗ್ಯಾರಂಟಿ ಈಡೇರಿಸದೇ ಮಾತು ತಪ್ಪಿದ ನಾಯಕ ಎಂದು ಬಿಜೆಪಿ ನಾಯಕರು ಪ್ರತಿಭಟನೆಗೆ ಮುಂದಾಗಿದ್ದರೇ ಇತ್ತ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ಮಾತ್ರ ಸಿದ್ದರಾಮಯ್ಯ ನುಡಿದಂತೆ ನಡೆಯುವವರು, ಗ್ಯಾರಂಟಿಗಳನ್ನು ಜಾರಿ ಮಾಡಿಯೇ ಮಾಡುತ್ತಾರೆ ಎಂದು ಹಾಡಿ ಹೊಗಳಿದ್ದಾರೆ.

ತಮ್ಮ ಕ್ಷೇತ್ರ ಯಶವಂತಪುರದ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕಾಗಿನೆಲೆ ಮಹಾ ಸಂಸ್ಥಾನ ಮಠದ ಶಾಖಾಮಠದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯರನ್ನು ನೋಡಿ ತಮ್ಮ ಭಾಷಣದ ಆರಂಭದಲ್ಲೇ, ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ, ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೊಗಳಿದರು. ಸಿದ್ದರಾಮಯ್ಯರನ್ನು ಜನಪ್ರಿಯ ಮುಖ್ಯಮಂತ್ರಿ ಎಂದು ಕರೆಯುತ್ತಿದ್ದ ಹಾಗೆಯೇ ನೆರೆದಿದ್ದ ಜನರೆಲ್ಲಾ ಜಯಘೋಷ ಮೊಳಗಿಸಿದರು.

ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ಅವಧಿಯಲ್ಲಿ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಸಿಕ್ಕಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಯಾವತ್ತೂ ಸಹ ಹಣ ಇಲ್ಲ ಎಂದು ಹೇಳಿಲ್ಲ. ಅವರ ಅನುದಾನದಲ್ಲಿ ಬೆಳೆದು ಎರಡನೇ ಬಾರಿ ಶಾಸಕನಾದೆ. ಪಕ್ಷಾಂತರ ಹೋಗಿದ್ದರೂ ನಾನು ಯಾವತ್ತೂ ಸಿದ್ದರಾಮಯ್ಯನವರನ್ನು ಮರೆತಿಲ್ಲ. ನುಡಿದಂತೆ ನಡೆದ ವ್ಯಕ್ತಿ ಸಿದ್ದರಾಮಯ್ಯ. ರಾಜ್ಯದ ಜನರ ನಾಡಿ ಮಿಡಿತ ಅವರಿಗೆ ಗೊತ್ತಿದೆ ಎಂದರು.

ಸಿದ್ದರಾಮಯ್ಯ ಅವರು ಹೇಳಿದ್ದನ್ನು ಮಾಡಿ ತೋರಿಸುತ್ತಾರೆ. ಎಲ್ಲಾ ಗ್ಯಾರಂಟಿ ಘೋಷಣೆಗಳನ್ನು ಪೂರ್ಣ ಮಾಡಲು ಸಿಎಂ ಬದ್ಧರಾಗಿದ್ದಾರೆ. ನಾನು ಸಿದ್ದರಾಮಯ್ಯರ ಅಭಿಮಾನಿ ಮತ್ತು ಶಿಷ್ಯ ಎಂದು ಹೇಳಿದರು.

Join Whatsapp
Exit mobile version