ಹಾಸನ: ಹಾಸನ ಜಿಲ್ಲೆಯ ಬಿಜೆಪಿ ಶಾಸಕ ಪ್ರೀತಮ್ ಜೆ.ಗೌಡ ಅವರು ಚುನಾವಣೆ ಸಮೀಪಿಸುತ್ತಿರುವಾಗ ಬಡ ಕುಟುಂಬಗಳ ಹಕ್ಕುಪತ್ರಗಳ ಹೆಸರಿನಲ್ಲಿ ರಾಜಕೀಯ ಮಾಡಲು ಆರಂಭಿಸಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಸಿದ್ದೀಕ್ ಆನೇಮಹಲ್ ಆರೋಪಿಸಿದ್ದಾರೆ.
ಬಿಜೆಪಿ ಶಾಸಕ ಪ್ರೀತಮ್ ಜೆ. ಗೌಡ ಅವರಿಗೆ ತಾನು ಶಾಸಕನಾಗಿದ್ದ ನಾಲ್ಕೂವರೆ ವರ್ಷ ಕಾಲದಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರ ಬಗ್ಗೆ ಯಾವುದೇ ಕಾಳಜಿ ಇರಲಿಲ್ಲ. ಅವರ ಕಷ್ಟಗಳಿಗೆ ಸ್ಪಂದಿಸದ ಶಾಸಕರು ಚುನಾವಣೆ ಸಮೀಪಿಸುತ್ತಿರುವಾಗ ಹಕ್ಕುಪತ್ರ ನೀಡುವ ನಾಟಕವಾಡುತ್ತಿದ್ದಾರೆ. ಕಳೆದ 40 ವರ್ಷಗಳಿಂದ ಸಿದ್ದಯ್ಯ ನಗರ, ಅಂಬೇಡ್ಕರ್ ನಗರ, 23ನೇ ವಾರ್ಡ್ ಶ್ರೀನಗರ, 17 ನೆ ವಾರ್ಡ್ ಚಿಕ್ಕನಹಾಳು ಮತ್ತಿತರ ಕಡೆಗಳಲ್ಲಿ ನೂರಾರು ನಿವಾಸಿಗಳಿಗೆ ಹಕ್ಕುಪತ್ರ ಸಿಕ್ಕಿರಲಿಲ್ಲ. ಅಧಿಕಾರಕ್ಕೆ ಬಂದ ಯಾವ ಸರ್ಕಾರಗಳೂ ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ಕೊಡುವ ಪ್ರಯತ್ನ ಮಾಡಿಲ್ಲ. ಕಂದಾಯ ಇಲಾಖೆ ಈಗಾಗಲೇ ಬಡವರಿಗೆ ಹಕ್ಕುಪತ್ರ ನೀಡಲು ಆದೇಶ ಹೊರಡಿಸಿದ್ದು, ಅದರಂತೆ ಈ ವಾರ್ಡ್ ಗಳಲ್ಲಿ 100ಕ್ಕೂ ಅಧಿಕ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕಿದೆ. ಆದರೆ ಶಾಸಕ ಪ್ರೀತಂ ಗೌಡ ಅವರು ತನಗೆ ಬೇಕಾದವರು, ಹಿಂಬಾಲಕರಿಗೆ ಹಕ್ಕುಪತ್ರ ನೀಡಿ ಉಳಿದವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದೂರಿದರು.
ಚುನಾವಣೆ ಸಮೀಪಿಸುತ್ತಿರುವಾಗ ಮಾತ್ರ ಅಲ್ಪಸಂಖ್ಯಾತರ ನೆನಪು ಮಾಡಿಕೊಳ್ಳುವ ಪ್ರೀತಂ ಗೌಡ ಅವರಿಗೆ ಈ ಬಾರಿ ಸೋಲಿನ ಭಯ ಕಾಡುತ್ತಿದೆ. ಶ್ರೀನಗರ ವಾರ್ಡ್’ಗೆ ಇತ್ತೀಚೆಗೆ ಶಾಸಕರು ರಾತ್ರಿ ವೇಳೆ ತೆರಳಿ ಬೆದರಿಕೆಯ ರೀತಿಯಲ್ಲಿ ಮತ ಕೇಳಿರುವ ವೀಡಿಯೋ ಬಹಿರಂಗಗೊಂಡಿತ್ತು ಎಂದು ಅವರು ಆರೋಪಿಸಿದರು.
ಪಕ್ಷೇತರ ನಗರ ಸಭೆ ಸದಸ್ಯ ಆಶು ಆಸಿಫ್, ಎಂಆರ್’ಎಂ ಸದಸ್ಯನೂ ಮಾಜಿ ಜಿಲ್ಲಾ ವಕ್ಫ್’ನ ಅಧ್ಯಕ್ಷ ಫರ್ವೀಝ್ ಮುಂತಾದ ಬಿಜೆಪಿ ಬೆಂಬಲಿಗರ ಸಹಾಯದಿಂದ ಇದೀಗ ಪ್ರೀತಂ ಗೌಡ ಅವರು ಬಡ ಮುಸ್ಲಿಮರು ವಾಸಿಸುತ್ತಿರುವ ಕಾಲೋನಿಗಳಲ್ಲಿ ಹಕ್ಕುಪತ್ರದ ಹೆಸರಿನಲ್ಲಿ ಮತ ಕಬಳಿಸಲು ಮುಂದಾಗಿದ್ದಾರೆ. ಇದನ್ನು ಮುಸ್ಲಿಮ್ ಮತದಾರರು ವಿಫಲಗೊಳಿಸಲಿದ್ದಾರೆ ಎಂದು ಸಿದ್ದೀಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.