ಶಿವಮೊಗ್ಗ: ಸೊರಬದ ಬಿಜೆಪಿ ಶಾಸಕ ಕುಮಾರ್‌ಬಂಗಾರಪ್ಪ ಅವರ ಆಪ್ತ ಸಹಾಯಕ ಉಮೇಶ್‌ಗೌಡ ಮಾಜಿ ಸೈನಿಕರ ಕೋಟಾದಡಿ ರಾಜಕೀಯ ಪ್ರಭಾವ ಬಳಸಿಕೊಂಡು ಅಕ್ರಮವಾಗಿ 4 ಎಕರೆ ಭೂಮಿ ಮಂಜೂರು ಮಾಡಿಸಿಕೊಂಡಿರುವ ಹಗರಣ ಈಗ ಬೆಳಕಿಗೆ ಬಂದಿದೆ.
ಸೇನೆಯಿಂದ ನಿವೃತ್ತಿ ಹೊಂದಿ ಪಿಡಿಓ ಹುದ್ದೆಯಲ್ಲಿರುವ ಉಮೇಶ್ ಗೌಡ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಆಪ್ತಸಹಾಯಕರಾಗಿ, ಕಾರ್ಯನಿರ್ವಹಿಸುತ್ತಿದ್ದು, ಶಾಸಕರ ರಾಜಕೀಯ ಪ್ರಭಾವ ಬಳಸಿಕೊಂಡು ಸುಳ್ಳು ದಾಖಲೆ ಗಳನ್ನು ಸಲ್ಲಿಸಿ ಕುಂಬತ್ತಿ ಗ್ರಾಮದಲ್ಲಿ ಮಾಜಿ ಸೈನಿಕರ ಕೋಟಾದಡಿ ನಾಲ್ಕು ಎಕರೆ ಜಮೀನು ಕಬಳಿಸಿರುವುದು ಬಯಲಾಗಿದೆ.
ಈ ಕುರಿತು ಇಂದು ಸುದ್ದಿಗೋಷ್ಟಿಯಲ್ಲಿ ಉಮೇಶ್ ಗೌಡನ ಭೂ ಕಬಳಿಕೆ ಅಕ್ರಮವನ್ನು ದಾಖಲೆ ಸಹಿತ ಬಿಡುಗಡೆ ಮಾಡಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಮಹೇಶ್ ಶಕುನವಳ್ಳಿ ಅವರು, ಉಮೇಶ್ ಗೌಡ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನವರಾಗಿದ್ದು, ಪಿಂಚಣಿ ಪಡೆಯುತ್ತಿದ್ದಾರೆ. ಅಲ್ಲದೆ ಸಿದ್ದಾಪುರ ತಾಲ್ಲೂಕಿನಲ್ಲಿ ಭೂಮಿಯನ್ನು ಹೊಂದಿರುತ್ತಾರೆ. ಈಗಾಗಲೆ ಸೊರಬದಲ್ಲಿ ಮಾಜಿ ಸೈನಿಕರ ಕೋಟಾದಡಿ 2015 ರಿಂದ 36 ಸೈನಿಕರು ಅರ್ಜಿ ಸಲ್ಲಿಸಿ ಭೂಮಿಗಾಗಿ ಕಾಯುತ್ತಿರುವಾಗ ಜೇಷ್ಠತೆಯನ್ನು ಉಲ್ಲಂಘಿಸಿ 2016 ರಲ್ಲಿ ಅರ್ಜಿ ಸಲ್ಲಿಸಿದ ಉಮೇಶ್ ಗೌಡನಿಗೆ ತರಾತುರಿಯಲ್ಲಿ ಯಾವುದೇ ದಾಖಲೆಗಳು ಇಲ್ಲದೆ ತಹಶೀಲ್ದಾರರು ಕುಂಬತ್ತಿ ಗ್ರಾಮದಲ್ಲಿ 4 ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.
ಭೂ ಮಂಜೂರಾತಿ ಅರ್ಜಿಯಲ್ಲಿ ಮಾಜಿ ಸೈನಿಕ ಎಂದು ನಮೋದಿಸದೆ, ಶಾಸಕರ ಆಪ್ತಸಹಾಯಕ ಎಂದು ನಮೋದಿಸುವ ಮೂಲಕ ಅಧಿಕಾರಿಗಳ ಮೇಲೆ ರಾಜಕೀಯಪ್ರಭಾವರ ಬೀರುವ ಹುನ್ನಾರ ನಡೆಸಿರುವ ಉಮೇಶ್ ಗೌಡ ವಾರ್ಷಿಕ 5.14 ಲಕ್ಷ ರೂ. ಆದಾಯ ಬರುತ್ತಿದೆ ಎಂದು ಕೇವಲ ಪ್ರಮಾಣಪತ್ರ ಸಲ್ಲಿಸಿದ್ದಾರೆ ವಿನಃ ದೃಢೀಕೃತ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ. ಮೂಲತಃ ಸಿದ್ದಾಪುರ ತಾಲ್ಲೂಕಿನ ನಿವಾಸಿಯಾಗಿರುವ ಉಮೇಶ್ ಗೌಡ ಸಿದ್ದಾಪುರ ತಾಲ್ಲೂಕಿನ ಕೊಂಡ್ಲಿ ಹೋಬಳಿ ಕಸ್ತೂರ ಗ್ರಾಮದ ಸ.ನಂ 3/7 ರಲ್ಲಿ ತಾನು ಹೊಂದಿರುವ ಆಸ್ತಿ ಇದ್ದರೂ ಅದನ್ನು ಮರೆಮಾಚಿ ಸೊರಬ ನಿವಾಸಿ ಎಂದು ಹೇಳಿಕೊಂಡಿದ್ದು ಯಾವುದಕ್ಕೂ ನಿರ್ಧಿಷ್ಟ ದಾಖಲೆಗಳನ್ನು ಸಲ್ಲಿಸದೆ ಸರ್ಕಾರಕ್ಕೆ ವಂಚಿಸಿದ್ದಾನೆ. ಈತನ ವಿರುದ್ದ ಸರ್ಕಾರ ಈ ಕೂಡಲೆ ಪೊಲೀಸ್ ಕೇಸು ದಾಖಲಿಸಿ ಅಕ್ರಮವಾಗಿ ಮಂಜೂರು ಮಾಡಿರುವ ಭೂಮಿಯ ಪಾಣಿಯನ್ನು ರದ್ದು ಪಡಿಸಬೇಕು ಎಂದು ಮಹೇಶ್ ಶಕುನವಳ್ಳಿ ಆಗ್ರಹಿಸಿದರು.
ಉಮೇಶ್ ಗೌಡನಿಗೆ ಮಂಜೂರು ಮಾಡಿರುವ ಭೂಮಿಯ ಮಹಜರ್‌ನಲ್ಲಿ ಕಂದಾಯಾಧಿಕಾರಿಗಳು ಯಾವುದೇ ಬೆಲ ಬಾಳುವ ಮರಗಳಿಲ್ಲ ಎಂದು ವರದಿ ನೀಡಿದ್ದರೆ. ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ಈ ಜಾಗದಲ್ಲಿ 1988 ರಿಂದ ಅಕೇಶಿಯ ನಡುತೋಪು ಇದೆ ಸಂಬಂಧಪಟ್ಟ ಇಲಾಖೆ ಅನುಮತಿ ಪಡೆಯಬೇಕು ಎಂದು ವರದಿ ಸಲ್ಲಿಸಿದ್ದಾರೆ. ಹಾಗಾದರೆ ಕಂದಾಯಾಧಿಕಾರಿಗಳ ಮಹಜರ್ ವರದಿ ಶಾಸಕರ ಕಚೇರಿಯಲ್ಲಿ ಸಿದ್ದಪಡಿಸಲಾಯಿತಾ? ಅಕ್ರಮ ಭೂಮಿ ನೋಂದಣಿಯನ್ನು ತಡೆಯುತ್ತೇನೆ ಎಂದು ಘೋಷಿಸುವ ಶಾಸಕರು ತಮ್ಮ ಆಪ್ತ ಸಹಾಯಕನೆ ಸುಳ್ಳು ದಾಖಲೆಗಳನ್ನು ಕೊಟ್ಟು, ಮರೆಮಾಚಿ ಅಕ್ರಮವಾಗಿ ಭೂಮಿ ಪಡೆದಿರುವ ಬಗ್ಗೆ ಯಾಕೆ ಮೌನವಹಿಸಿದ್ದಾರೆ? ಇದಕ್ಕೆ ಶಾಸಕರು ಉತ್ತರಿಸಬೇಕು ಎಂದು ಕೇಳಿದರು.
ಸರ್ಕಾರ ದ ನಿಯಮಗಳನ್ನು ಉಲ್ಲಂಘಿಸಿ ಶಾಸಕರ ಪ್ರಭಾವಬಳಸಿಕೊಂಡು ಉಮೇಶ್ ಗೌಡ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾನೆ. ಕಂದಾಯ ಇಲಾಖೆ ಅಧಿಕಾರಿಗಳು ಉಮೇಶ್ ಗೌಡನ ಕಪಿಮುಷ್ಟಿಯಲ್ಲಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸಾಮಾನ್ಯ ಗುತ್ತಿಗೆ ನೌಕರರ ಮೇಲೆ ದರ್ಪ ತೋರುವ ಶಾಸಕ ಕುಮಾರ್ ಬಂಗಾರಪ್ಪ ತಮ್ಮ ಆಪ್ತನೇ ಸರ್ಕಾರಕ್ಕೆ ವಂಚಿಸಿ ಅಕ್ರಮವಾಗಿ ಭೂ ಕಬಳಿಸಿರುವುದರ ಬಗ್ಗೆ ಬಾಯಿ ಬಿಡದಿರುವುದು ಇದರಲ್ಲಿ ಅವರ ಪಾತ್ರವು ಇರುವುದನ್ನು ತೋರಿಸುತ್ತದೆ ಎಂದ ಮಹೇಶ್ ಶಕುನವಳ್ಳಿ ಅವರು ತಹಶೀಲ್ದಾರರು ಈ ಕೂಡಲೆ ಉಮೇಶ್ ಗೌಡನಿಗೆ ಅಕ್ರಮವಾಗಿ ಮಂಜೂರು ಮಾಡಿರುವ ಭೂಮಿಯ ಪಾಣಿಯನ್ನು ರದ್ದು ಪಡಿಸದಿದ್ದರೆ. ತಾಲ್ಲೂಕು ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಲಾಗುವುದು, ಅಗತ್ಯಬಿದ್ದರೆ ಅರೆಬೆತ್ತಲೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಡಿ ಎಸ್ ಎಸ್ ವಿಭಾಗೀಯ ಸಂಚಾಲಕ ಗುರುರಾಜ್, ಮುಖಂಡರಾದ ಬಂಗಾರಪ್ಪನಿಟ್ಟಕ್ಕಿ, ಪ್ರಭುಹೀರೆಚೌಟ ಮೊದಲಾದವರು ಉಪಸ್ಥಿತರಿದ್ದರು.