ಗುವಾಹಟಿ: ಬಿಜೆಪಿ ನಾಯಕಿಯೊಬ್ಬರ ಮೃತದೇಹ ರಾಷ್ಟ್ರೀಯ ಹೆದ್ದಾರಿಯ ಬಳಿ ಪತ್ತೆಯಾದ ಘಟನೆ ಅಸ್ಸೋಂದ ಗೋಲ್ಪಾರಾ ಜಿಲ್ಲೆಯಲ್ಲಿ ನಡೆದಿದೆ.
ಕೊಲೆ ಮಾಡಿ ಶವ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಬಿಜೆಪಿ ನಾಯಕರು ರಾಜ್ಯ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಬಿಜೆಪಿ ಸಕ್ರಿಯ ಕಾರ್ಯಕರ್ತೆಯಾಗಿದ್ದ ಜೋನಾಲಿ ನಾಥ್ ಗೋಲ್ಪಾರಾ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿದ್ದರು. ಮಟಿಯಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಅವರ ಮೃತದೇಹವು ಭಾನುವಾರ ಮಧ್ಯರಾತ್ರಿ ಕೃಷ್ಣೈನ ಶಾಲ್ಪಾರಾ ಪ್ರದೇಶದಲ್ಲಿ ಎನ್ಹೆಚ್ 17ರ ಬಳಿ ಪತ್ತೆಯಾಗಿದೆ.
ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೊಲೆಗೆ ಮುನ್ನ ತೀವ್ರವಾದ ಹಲ್ಲೆಯನ್ನು ಮಾಡಿರುವ ಶಂಕೆ ಇದ್ದು, ದೇಹದ ಮೇಲೆ ಹಲವಾರು ಗಾಯದ ಗುರುತುಗಳನ್ನು ಸಹ ಪತ್ತೆಯಾಗಿವೆ.