Home ಟಾಪ್ ಸುದ್ದಿಗಳು ಮಹಿಳಾ ಜನಪ್ರತಿನಿಧಿ ಮೇಲೆ ಅನುಚಿತ ವರ್ತನೆ: ಬಿಜೆಪಿ ಮುಖಂಡನ ಗಡಿಪಾರಿಗೆ ಒತ್ತಾಯ

ಮಹಿಳಾ ಜನಪ್ರತಿನಿಧಿ ಮೇಲೆ ಅನುಚಿತ ವರ್ತನೆ: ಬಿಜೆಪಿ ಮುಖಂಡನ ಗಡಿಪಾರಿಗೆ ಒತ್ತಾಯ

►ಚೆಟ್ಟಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ

ಮಡಿಕೇರಿ: ಇತ್ತೀಚೆಗೆ ನಡೆದ ಚೆಟ್ಟಳ್ಳಿಯ ಗ್ರಾಮಸಭೆಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಮೇಲೆ ಅನುಚಿತವಾಗಿ ವರ್ತಿಸುವ ಮೂಲಕ ದೌರ್ಜನ್ಯ ಎಸಗಿರುವ ಬಿಜೆಪಿ ಮುಖಂಡ ಬಲ್ಲಾರಂಡ ಮಣಿ ಉತ್ತಪ್ಪ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಚೆಟ್ಟಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಿದರು.
ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು
ಬಿಜೆಪಿ ಹಾಗೂ ಬಲ್ಲಾರಂಡ ಮಣಿ ಮುತ್ತಪ್ಪ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿದರು.

ಕಾಂಗ್ರಸ್ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಮಾತನಾಡಿ, ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದ್ದು,
ಅನ್ಯಾಯಕ್ಕೊಳಗಾದ ಮಹಿಳೆ ದೂರು ನೀಡಿ ಹತ್ತು ದಿನಗಳು ಕಳೆದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಪ್ರಭಾವಕ್ಕೆ ಒಳಗಾಗಿ ಠಾಣೆಯಲ್ಲೇ ಜಾಮೀನು ನೀಡಿ ಕಳಿಸಿದ್ದಾರೆ.
ಕಾನೂನನ್ನು ಎಲ್ಲರೂ ಗೌರವಿಸಬೇಕಾಗಿದ್ದು, ಪೊಲೀಸರು ಪ್ರಭಾವಿಗಳಿಗೆ ಒಂದು ಕಾನೂನು, ಸಾಮಾನ್ಯ ಜನರಿಗೊಂದು ಕಾನೂನೆಂಬ
ನೀತಿಯನ್ನು ಅನುಸರಿಸುತ್ತಿರುವುದು ಸರಿಯಾದ ನಡೆಯಲ್ಲ ಕೂಡಲೇ ತನಿಖೆ ನಡೆಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಮಹಿಳಾ ಜನಪ್ರತಿನಿಧಿಯ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಚೆಟ್ಟಳ್ಳಿ ಗ್ರಾಮದಲ್ಲಿ
ಬೃಹತ್ ಪ್ರತಿಭಟನೆ ಮೂಲಕ ದೌರ್ಜನ್ಯ ಎಸಗಿದ ವ್ಯಕ್ತಿಯನ್ನು ಗಡಿಪಾರಿಗೆ ಒತ್ತಾಯಿಸಿದ್ದೇವೆ.
ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರೂ ಆಗಿರುವ ಬಲ್ಲಾರಂಡ ಮಣಿ ಉತ್ತಪ್ಪ ಚೆಟ್ಟಳ್ಳಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಮಹಿಳಾ ಜನಪ್ರತಿನಿಧಿಯೊಂದಿಗೆ ಅಸಭ್ಯವಾಗಿ ವರ್ತಿಸುವ ಮೂಲಕ ಕೈ ಮಾಡಿ ದೌರ್ಜನ್ಯ ಎಸಗಿರುವ ಪ್ರಕರಣ
ನಾಚಿಕೆಗೇಡಿನ ವಿಷಯವಾಗಿದೆ.
ಪೊಲೀಸರು ತಾರತಮ್ಯ ನೀತಿ ಅನುಸರಿಸದೆ ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ ಅವರು
ಇಂತಹ ಪ್ರಕರಣಗಳು ಮರುಕಳಿಸಿದಂತೆ ಎಚ್ಚರ ವಹಿಸುವ ಮೂಲಕ ಮಹಿಳೆಗೆ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೆಪಿಸಿಸಿ ವಕ್ತಾರ ಚಂದ್ರಮೌಳಿ ಮಾತನಾಡಿ, ಪ್ರತಿಯೊಬ್ಬರು ಸಂವಿಧಾನಕ್ಕೆ ಗೌರವ ನೀಡುವ ಮೂಲಕ ಕಾನೂನು ಪಾಲಿಸಬೇಕಾಗಿದೆ .
ಬಿಜೆಪಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವದು ಸರಿಯಾದ ನಡೆಯಲ್ಲ .
ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣ ಪೊಲೀಸರು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮುಂದೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು .

ಕಾಂಗ್ರೆಸ್ ಮುಖಂಡ ಮಂಥರ್ ಗೌಡ ಮಾತನಾಡಿ,
ಚೆಟ್ಟಳ್ಳಿಯಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯ ಪ್ರತಿಯೊಬ್ಬರು ತಲೆತಗ್ಗಿಸುವಂತಾಗಿದೆ.
ಮಹಿಳೆಯರಿಗೆ ಗೌರವ ಕೊಡಬೇಕಾದವರು ದೌರ್ಜನ್ಯ ಎಸಗುತ್ತಿರುವುದು ಸರಿಯಾದ ನಡೆಯಲ್ಲ ಬಿಜೆಪಿ ಸರ್ಕಾರದ ಬೆಂಬಲಕ್ಕೆ ನಿಂತ ಪೊಲೀಸರು ದೌರ್ಜನ್ಯ ಎಸಗಿದ ವ್ಯಕ್ತಿಯನ್ನ ಬಂಧಿಸದೆ ಮೌನವಾಗಿರುವುದರ ಹಿಂದೆ ರಾಜಕೀಯ ಪ್ರಭಾವಿಗಳ ಹಸ್ತಕ್ಷೇಪ ಇದೆ. ಅನ್ಯಾಯಕ್ಕೊಳಗಾದ ಮಹಿಳೆಗೆ ಪೊಲೀಸರಿಂದ ನ್ಯಾಯ ಸಿಗಲಿಲ್ಲ ಎಂದಾದರೆ ಸಾಮಾನ್ಯ ಜನರ ಗತಿಯೇನು. ಬಿಜೆಪಿಯ ದುರಾಡಳಿತದ ಸರ್ಕಾರದ ವಿರುದ್ಧ ಪ್ರತಿಯೊಬ್ಬ ಕಾರ್ಯಕರ್ತರು ಎಚ್ಚೆತ್ತುಕೊಳ್ಳುವುದರ ಮೂಲಕ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು. ಪ್ರತಿಯೊಬ್ಬರು ಬದಲಾವಣೆಯನ್ನು ಬಯಸಿದ್ದು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ ಶಶಿಧರ್ ಮಾತನಾಡಿ, ಚೆಟ್ಟಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಶಾಂತಿ ಸಹಬಾಳ್ವೆ ನೆಮ್ಮದಿಯಿಂದ ಜೀವನ ನಡೆಸುತ್ತಿರುವ ಜನರ ಮಧ್ಯೆ
ಅಶಾಂತಿ ಸೃಷ್ಟಿಸಲು ಮುಂದಾಗಿರುವ ಮಣಿ ಉತ್ತಪ್ಪ ಅವರ ಮೇಲೆ ಪೊಲೀಸರು ಗಂಭೀರವಾಗಿ ಪ್ರಕರಣ ದಾಖಲಿಸದೆ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಮಹಿಳೆಯ ಮೇಲೆ ದೌರ್ಜನ್ಯ ಎಸಗಿರುವ ಪ್ರಕರಣದ ಆರೋಪಿಯನ್ನು ಕೂಡಲೇ ಬಂಧಿಸಿ ಪೊಲೀಸರ ಮೇಲೆ ಇಟ್ಟಿರುವ ಗೌರವವನ್ನು ಕಾಪಾಡಿ ಕೊಳ್ಳಬೇಕು.
ಮಹಿಳೆಗೆ ನ್ಯಾಯ ಸಿಗದಿದ್ದಲ್ಲಿ ಪೊಲೀಸರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭ ಮಾಜಿ ಸಚಿವ ಬಿ.ಎ ಜೀವಿಜಯ,
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಕಾಂಗ್ರೆಸ್ ಮುಖಂಡರುಗಳಾದ ನಟೇಶ್ ಗೌಡ, ಶಾಹಿದ್, ಟಿ. ಪಿ ರಮೇಶ್, ಮುನೀರ್ ಅಹಮದ್, ಲೋಕೇಶ್, ಕಾಂತರಾಜು, ಹಂಸ ಕೊಟ್ಟಮುಡಿ, ಇಸ್ಮಾಯಿಲ್, ಅನಂತ್ ಕುಮಾರ್, ಮಿಥುನ್, ಮಂಜುನಾಥ್, ಉಸ್ಮಾನ್ ಸುಂಟಿಕೊಪ್ಪ, ಮಂಜುನಾಥ್ ಗುಂಡೂರಾವ್, ಹ್ಯಾರಿಸ್, ಹಕೀಮ್, ರಂಜಿ ಪೂಣಚ್ಚ, ಸತೀಶ್, ಸೂರಜ್, ಬೋಪಣ್ಣ, ನವೀನ್, ಕಿರಣ್, ಸಫಿಯಾ ಮೊಹಮ್ಮದ್, ಸುಹಾದ ಅಶ್ರಫ್, ಸಲಾಂ, ತೀರ್ಥಕುಮಾರ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತಪ್ಪ, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಬು ವರ್ಗೀಸ್ ಸೇರಿದಂತೆ ಮತ್ತಿತರರು ಇದ್ದರು .

Join Whatsapp
Exit mobile version