ಬೆಂಗಳೂರು: ರಾಜಧಾನಿಗೆ ಬಂದಿಳಿದ ಬಿಜೆಪಿ ಉಸ್ತುವಾರಿ | ಮೂರು ದಿನಗಳಲ್ಲಿ ನಿರ್ಧಾರವಾಗಲಿದೆ BSY ಭವಿಷ್ಯ!?

Prasthutha|

ಬೆಂಗಳೂರು: ಆಡಳಿತ ಪಕ್ಷದೊಳಗಿನ ಆಂತರಿಕ ಕಲಹ ಹಾಗೂ ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಮಹತ್ವದ ಸಭೆ ನಡೆಸುವ ಉದ್ದೇಶದಿಂದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ. ಈಗಾಗಲೇ ದೆಹಲಿಯಿಂದ ವಿಮಾನ ಮೂಲಕ ಬೆಂಗಳೂರಿಗೆ ಬಂದಿಳಿದಿರುವ ಅರುಣ್ ಸಿಂಗ್ ಇನ್ನು ಮೂರು ದಿನಗಳ ಕಾಲ ರಾಜ್ಯ ರಾಜಧಾನಿಯಲ್ಲೇ ಇದ್ದು ಸತತ ಸಭೆ ನಡೆಸಿ, ಬಳಿಕ ಸಂಗ್ರಹಿಸಿದ ಅಭಿಪ್ರಾಯವನ್ನ ಹೈಕಮಾಂಡ್ ಗೆ ನೀಡಲಿರುವುದಾಗಿ ತಿಳಿದು ಬಂದಿದೆ.

- Advertisement -

ಅರುಣ್ ಸಿಂಗ್ ಭೇಟಿ ಹಿನ್ನೆಲೆ ಈಗಾಗಲೇ ಬಿಜೆಪಿಯ ಹಲವು ಶಾಸಕರು ರಾಜಧಾನಿಗೆ ತೆರಳಿದ್ದು, ತಮ್ಮ ಅಹವಾಲನ್ನ ರಾಜ್ಯ ಉಸ್ತುವಾರಿಗಳ ಮುಂದಿಡಲು ಸಿದ್ಧರಾಗಿದ್ದಾರೆ. ಈಗಾಗಲೆ ನಾಯಕತ್ವದ ಬದಲಾವಣೆ ಪರ ಒಲವು ಹೊಂದಿದ ಶಾಸಕರು ಹಾಗೂ ಸಿಎಂ ಪರ ಇರುವ ಶಾಸಕರು ಸಿಲಿಕಾನ್ ಸಿಟಿಯಲ್ಲಿ ಬೀಡು ಬಿಟ್ಟಿದ್ದಾರೆ.

ಇಂದು ಸಚಿವರ ಜೊತೆ ಸಭೆ ನಡೆಸಲಿರುವ ಅರುಣ್ ಸಿಂಗ್, ನಾಳೆ ಬೆಳಿಗ್ಗೆಯಿಂದಲೇ ಕುಮಾರ ಕೃಪ ಅತಿಥಿ ಗೃಹದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸಂಸದರ ಜೊತೆ ಸಭೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಜೂನ್ 18 ರಂದು ಬಿಜೆಪಿ ಪದಾಧಿಕಾರಿಗಳ ಜೊತೆ ಬೆಳಿಗ್ಗೆ ಜಗನ್ನಾಥ ಭವನದಲ್ಲಿ ಸಭೆ ನಡೆದರೆ, ಸಂಜೆ 5 ಗಂಟೆಯ ಕೋರ್ ಕಮಿಟಿ ಸಭೆಯೊಂದಿಗೆ ಅರುಣ್ ಸಿಂಗ್ ಪ್ರವಾಸ ಮುಗಿಯಲಿದೆ.

- Advertisement -

ಅರುಣ್ ಸಿಂಗ್ ದೆಹಲಿಗೆ ವಾಪಾಸ್ ಆದ ಬಳಿಕವಷ್ಟೇ ನಾಯಕತ್ವ ಬದಲಾವಣೆ ಕುರಿತು ಸ್ಪಷ್ಟ ನಿಲುವು ತಳೆಯುವ ಸಾಧ್ಯತೆ ಇದೆ. ಹೀಗಾಗಿ ಸಚಿವರು, ಶಾಸಕರು, ಸಂಸದರು ನೀಡುವ ಅಭಿಪ್ರಾಯಗಳು ಬಿಎಸ್ ಯಡಿಯೂರಪ್ಪನವರ ಸಿಎಂ ಸೀಟಿನ ಭವಿಷ್ಯ ನಿರ್ಧರಿಸಲಿದೆ.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ “ಮುಂದಿನ ಎರಡು ವರ್ಷಗಳ ಕಾಲ ಯಡಿಯೂರಪ್ಪನವರೇ ಸಿಎಂ” ಎಂದು ಹೇಳಿದ್ದರೆ, ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ “ಪಕ್ಷದಲ್ಲಿ ನಾಯಕತ್ವ ಬದಲಾವಣೆ ಪ್ರಸ್ತಾವ ಇರುವುದು ನಿಜ” ಎಂದು ತಿಳಿಸಿದ್ದಾರೆ.     

Join Whatsapp