Home ಟಾಪ್ ಸುದ್ದಿಗಳು ಬಿಜೆಪಿ, ಜೆಡಿಎಸ್ ಬರ ಅಧ್ಯಯನ ನೆಪದಲ್ಲಿ ಮೊಸಳೆ ಕಣ್ಣೀರು: ಉಸ್ತುವಾರಿ ಸಚಿವ ಶರಣಬಸಪ್ಪಗೌಡ

ಬಿಜೆಪಿ, ಜೆಡಿಎಸ್ ಬರ ಅಧ್ಯಯನ ನೆಪದಲ್ಲಿ ಮೊಸಳೆ ಕಣ್ಣೀರು: ಉಸ್ತುವಾರಿ ಸಚಿವ ಶರಣಬಸಪ್ಪಗೌಡ

ಶಹಾಪುರ: ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪರಸ್ಪರ ತಂಡ ರಚಿಸಿಕೊಂಡು ಬರ ಅಧ್ಯಯನ ನೆಪದಲ್ಲಿ ಮೊಸಳೆ ಕಣ್ಣೀರು ಸುರಿಸಲು ಹೊರಟಿದ್ದಾರೆ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಹೇಳಿದ್ದಾರೆ.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಜನತಾದರ್ಶನ ಪೂರ್ವಭಾವಿ ಸಭೆ ಹಾಗೂ ಬರ ನಿರ್ವಹಣೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗಾಗಲೇ ಸರ್ಕಾರ ಬರ ಪೀಡಿತ ಪ್ರದೇಶಗಳ ವಿವರ ಹಾಗೂ ಬರ ಪರಿಹಾರಕ್ಕೆ ಬೇಕಾದ ಹಣಕಾಸಿನ ನೆರವು ಕೋರಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 17 ಸಾವಿರ ಕೋಟಿ ರೂ.ಗಳ ಪರಿಹಾರ ಕೇಳಿದೆ. ಈವರೆಗೂ ಕೇಂದ್ರ ಸರ್ಕಾರ 1 ರೂಪಾಯಿಯೂ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.

ಕೃಷಿ ಸಚಿವರು ನಾಲ್ಕು ಸಲ ಪ್ರಧಾನಮಂತ್ರಿ, ಕೃಷಿ ಸಚಿವ ಹಾಗೂ ಗೃಹ ಸಚಿವರನ್ನು ಭೇಟಿಯಾಗಲು ಹೋದರೆ ಅವಕಾಶ ಕೊಡಲಿಲ್ಲ. ಕೊನೆಗೆ ಕೃಷಿ ಹಾಗೂ ಗೃಹ ಕಾರ್ಯದರ್ಶಿಯವರಿಗೆ ಭೇಟಿಯಾಗಿ ಸಂಪೂರ್ಣ ವರದಿ ಸಲ್ಲಿಸಿ ಬಂದಿದ್ದಾರೆ.
ರಾಜ್ಯದಿಂದ ಆಯ್ಕೆಯಾದ ಸಂಸದರು ಕೇಂದ್ರದ ಸಚಿವರು ನಿಯೋಗ ತೆಗೆದುಕೊಂಡು ಕೇಂದ್ರದ ಮೇಲೆ ಒತ್ತಡ ತರಬಹುದಿತ್ತು. ಆದರೆ, ಪ್ರಧಾನಮಂತ್ರಿಯವರನ್ನು ಒತ್ತಾಯ ಮಾಡುವ ತಾಕತ್ತು ರಾಜ್ಯದ ಬಿಜೆಪಿ ಸಂಸದರಿಗೂ ಕೇಂದ್ರ ಸಚಿವರಿಗೂ ಇಲ್ಲ. ಇನ್ನ ಜೆಡಿಎಸ್ ಅವಕಾಶವಾದಿ, ಅದು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ ಎಂದು ಸಚಿವರು ಲೇವಡಿ ಮಾಡಿದರು.

ಸರ್ಕಾರ ಬರ ವಿವರಣೆ ತಪ್ಪಿನಿಂದ ಕೂಡಿದೆ. ಕೇಂದ್ರ ಅಧ್ಯಯನ ತಂಡ ಸರಿಯಾದ ವರದಿ ನೀಡಿಲ್ಲ ಎಂದು ಸಾಬೀತುಪಡಿಸಿದ ನಂತರ ಇವರು ಬರ ಅಧ್ಯಯನ ನಡೆಸಬೇಕಿತ್ತು. ಅದು ಬಿಟ್ಟು ರೈತರನ್ನು ದಾರಿ ತಪ್ಪಿಸುವ ಉದ್ದೇಶದಿಂದ, ಸರ್ಕಾರಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಅರ್ಥ ಇಲ್ಲದ ಬರ ಅಧ್ಯಯನ ಹೆಸರಲ್ಲಿ ಮೊಸಳೆ ಕಣ್ಣೀರು ಸುರಿಸಲು ಹೊರಟಿದೆ ಎಂದು ಟೀಕಿಸಿದರು.

Join Whatsapp
Exit mobile version